ಹುಬ್ಬಳ್ಳಿ : ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಹೆಚ್ಚಿನ ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಸಿದ್ಧಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ಅಶೋಕ್ ಹಾಸ್ಪಿಟಲ್ ವತಿಯಿಂದ ಪ್ರಾರಂಭಿಸಲಾಗಿರುವ 50 ಹಾಸಿಗೆಗಳ ಕೋವಿಡ್ ಹಾಸ್ಪಿಟಲ್ ಹಾಗೂ ದೇಶಪಾಂಡೆ ಫೌಂಡೇಶನ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಆರಂಭಿಸಲಾಗಿರುವ 800 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ನೀಡಲು ಹಲವು ಆಸ್ಪತ್ರೆಗಳು ಮುಂದೆ ಬಂದಿವೆ. ಹುಬ್ಬಳ್ಳಿಯ ಡಾಕ್ಟರ್ ಅಶೋಕ್ ಬಂಗಾರಶೆಟ್ಟರ್ ಅವರು ತಮ್ಮ ಆರ್ಥೋಪಿಡಿಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಡಾಕ್ಟರ್ ಕ್ರಾಂತಿ ಕಿರಣ್ ಅವರ ಬಾಲಾಜಿ ಹಾಸ್ಪಿಟಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅವರು ಸೂಕ್ತ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಹ ಆಸ್ಪತ್ರೆಯಲ್ಲಿ ನಿಯೋಜಿಸಿದ್ದಾರೆ.
ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಹಾಸ್ಪಿಟಲ್ ಎಂದು ಘೋಷಿಸಲಾಗಿದೆ. ಇದೇ ಮಾದರಿ ಹಲವು ಖಾಸಗಿ ಆಸ್ಪತ್ರೆಗಳು ಒಡಂಬಡಿಕೆ ಮಾಡಿಕೊಂಡು ಹಾಸಿಗೆಗಳನ್ನು ಹಾಗೂ ಸೂಕ್ತ ವೈದ್ಯಕೀಯ ಸಿಬ್ಬಂದಿಯನ್ನು ಜಿಲ್ಲಾಡಳಿತದ ನೆರವಿಗೆ ನೀಡಲು ಸಿದ್ಧವಾಗಿದೆ ಎಂದರು. ಗುರುರಾಜ ದೇಶಪಾಂಡೆಯವರು ಸ್ಥಾಪಿಸಿರುವ ದೇಶಪಾಂಡೆ ಫೌಂಡೇಶನ್ ಸಹಕಾರದೊಂದಿಗೆ ಸಂಸ್ಥೆಯ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್‌ನಲ್ಲಿ ಲಕ್ಷಣ ರಹಿತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು 800 ಹಾಸಿಗೆಗಳ ಕೇರ್ ಸೆಂಟರ್ ಆರಂಭಿಸಲಾಗಿದೆ.
ಸಣ್ಣ ಪ್ರಮಾಣದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕೋವಿಡ್ ರೋಗಿಗಳನ್ನಿರಿಸಿ ಚಿಕಿತ್ಸೆ ನೀಡುವುದು ಜಿಲ್ಲಾಡಳಿತಕ್ಕೆ ಕಷ್ಟವಾಗಿತ್ತು. ಇದೀಗ ಒಂದೇ ಸ್ಥಳದಲ್ಲಿ 800 ಜನರನ್ನು ಇರಿಸಿ ಅವರ ಆರೋಗ್ಯ ತಪಾಸಣೆ ಮಾಡುವುದಕ್ಕೆ ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗಿದೆ. ಜಿಲ್ಲಾಡಳಿತದ ವತಿಯಿಂದ ರೋಗಿಗಳಿಗೆ ಬೆಡ್,ದಿಂಬು, ಹೊದಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಸೋಪು, ಎಣ್ಣೆ, ಬ್ರಷ್ ಸೇರಿ ಅಗತ್ಯ ವಸ್ತಗಳ ಕಿಟ್‌ಗಳನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ನೀಡಲಾಗುವುದು. ರೋಗಿಗಳಿಗೆ ಬೇಸರ ಆಗದಿರಲು ಕೇರಂ, ಚೆಸ್, ಸೇರಿ ಇತರೆ ಆಟದ ಸಾಮಾನು ಹಾಗೂ ಪುಸ್ತಕಗಳನ್ನು ಇಡಲಾಗಿದೆ.
ದೇಶಪಾಂಡೆ ಫೌಂಡೇಶನ್ ವತಿಯಿಂದ ಲಕ್ಷಣ ರಹಿತ ರೋಗಿಗಳಿಗೆ ಆನ್‌ಲೈನ್ ಮೂಲಕ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು. ಆತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಇದಾಗಿದ್ದು, ಕೋವಿಡ್ ಹೋರಾಟದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಅಶೋಕ್ ಹಾಸ್ಪಿಟಲ್ ಹಾಗೂ ದೇಶಪಾಂಡೆ ಫೌಂಡೇಶನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.