ಬೆಂಗಳೂರು/ಹುಬ್ಬಳ್ಳಿ/ಮಂಗಳೂರು: ಮಾರಕ ರೋಗದ ಎರಡನೇ ರೂಪಾಂತರ ದೇಶದ ಜನರನ್ನು ಕಂಗಾಲು ಮಾಡಿಬಿಟ್ಟಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಲಾಕ್ಡೌನ್ ವಿಸ್ತರಣೆಗೊಂಡಿದ್ದು, ನಿರ್ಮಾಣ ಕಾಮಗಾರಿಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ಇದೆ. ಲಾಕ್ಡೌನ್ನಿಂದ ಜನಸಂಚಾರ, ವಾಹನ ಸಂಚಾರ ಕಡಿಮೆಯಾಗಿ ಕೆಲ ಮೂಲಭೂತ ಸೌಕರ್ಯ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಕೆಲವೆಡೆ ಸೋಂಕು ಭೀತಿ, ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳು ಕುಂಠಿತಗೊಂಡಿವೆ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಒಳಚರಂಡಿ ಕಾಮಗಾರಿಗಳು ಚುರುಕುಗೊಂಡಿವೆ.
ರಾಜ್ಯ ರಾಜಧಾನಿಯಲ್ಲಿ ಮಳೆಗಾಲಕ್ಕೆ ಆಗಬೇಕಾದ ಪೂರ್ವಸಿದ್ಧತೆಯೇನೋ ನಡೆಯುತ್ತಿದೆ. ಪ್ರತೀ ವರ್ಷ ಮುಂಜಾಗ್ರತಾ ಕ್ರಮ ಕೈಗೊಂಡರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. 209 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ, ಚರಂಡಿ ನಿರ್ಮಾಣ, ಚರಂಡಿ ದುರಸ್ತಿ ಕಾರ್ಯ, ಹೂಳೆತ್ತುವುದು ಸೇರಿದಂತೆ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ನಿಂದ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಪಾಲಿಕೆ ಕ್ರಮ ಕೈಗೊಂಡಿದೆ.
ಲಾಕ್ಡೌನ್ನಿಂದ ಜನದಟ್ಟಣೆ ಕಡಿಮೆಯಾದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಕೋವಿಡ್ ಭೀತಿ, ಲಾಕ್ಡೌನ್ ಪರಿಣಾಮ ಶೇ. 70ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಚರಂಡಿ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಿಗೆ ಮಾತ್ರ ಯಾವುದೇ ಹಿನ್ನಡೆಯಾಗಿಲ್ಲ.
ಮಂಗಳೂರಿನಲ್ಲಿ ಮಳೆಗಾಲಕ್ಕೂ ಮುನ್ನ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಚರಂಡಿಗಳ ಹೂಳೆತ್ತುವಿಕೆ, ದುರಸ್ತಿ ಕಾರ್ಯಗಳು ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿವೆ. ಆದ್ರೆ ಕೋವಿಡ್, ಲಾಕ್ಡೌನ್ನಿಂದ ಕೊಂಚ ಕಾರ್ಮಿಕರ ಕೊರತೆ ಎದುರಾಗಿದ್ದರೂ ಕೂಡ ಮಳೆಗಾಲಕ್ಕೆ ಮಾಡಬೇಕಾದ ಪೂರ್ವ ತಯಾರಿ ಸಾಕಷ್ಟು ಮುಗಿದಿದೆ.
ಇದನ್ನೂ ಓದಿ: ಲಸಿಕೆ ಮೊರೆ ಹೋಗುತ್ತಿರುವ ಜನತೆ... ಎರಡನೇ ಡೋಸ್ಗಾಗಿ ಪರದಾಟ
ಒಟ್ಟಾರೆ ಕೋವಿಡ್, ಲಾಕ್ಡೌನ್ ಪ್ರತೀ ಕ್ಷೇತ್ರದ ಮೇಲೂ, ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರಿದ್ದು ಮಾತ್ರ ಸುಳ್ಳಲ್ಲ. ಕೋವಿಡ್, ಲಾಕ್ಡೌನ್ ನಿಂದ ಕೆಲ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಆದ್ರೆ ಕಾರ್ಮಿಕರ ಕೊರತೆ, ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಕೆಲವೆಡೆ ಕೆಲ ಕಾಮಗಾರಿಗಳು ಕುಂಠಿತಗೊಂಡಿದ್ದನ್ನು ನಾವು ಅಲ್ಲಗಳೆಯುವಂತಿಲ್ಲ.