ಹುಬ್ಬಳ್ಳಿ : ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಆರು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 12 ಜನರಿಗೆ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ಹಾಗೂ 6,50,000 ದಂಡ ವಿಧಿಸಿ ತೀರ್ಪು ನೀಡಿದೆ.
ಬಾನಿ ಓಣಿಯ ಕಲ್ಲಪ್ಪ ತಂದೆ ಬಸವರಾಜ, ಶಿರಕೋಳ, ಸಿದ್ದಾರೂಢ ಈಶ್ವರಪ್ಪ ಶಿರಕೋಳ, ಅಯ್ಯಪ್ಪ ಬಸವರಾಜ ಶಿರಕೋಳ, ನಿಂಗಪ್ಪ ಶಂಕರಪ್ಪ ಶಿಂಧೆ, ಅಯ್ಯಪ್ಪ ಮಂಜುನಾಥ ಲಕ್ಕುಂಡಿ, ಮಂಜುನಾಥ ಮಲ್ಲೇಶಪ್ಪ ಉಪ್ಪಾರ, ಶ್ರೀಪಾದ ಪದ್ಮನಾಭ ಪೂಜಾರಿ, ದೊಡ್ಡಮನಿ ಚಾಳಿನ ವಿಶಾಲ ನಾಗರಾಜ ಜಾಧವ, ಅಜಯ ಗುರುನಾಥ ಗುತ್ತಲ, ಸಂತೋಷ ಗೋಪಾಲ ಸುನಾಯಿ, ಮಂಜುನಾಥ ಹನುಮಂತಪ್ಪ ಗೋಕಾಕ, ಅನಿಲ್ ಮುರಳೀಧರ ಎಂಬ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ನೀಡಿದೆ.
ಪಿಎಸ್ಐ ಆರ್.ಎಸ್. ಲಮಾಣಿ, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ಎಮ್. ಸಂಧಿಗವಾಡ ಪ್ರಕರಣದ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ಆರೋಪಿತರ ಮೇಲೆ ದೋಷಾರೋಪಣ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಇದೀಗ ಜೀವಾವಧಿ ಶಿಕ್ಷೆ ಹಾಗೂ 6,50,000ರೂ.ದಂಡ ವಿಧಿಸಿದೆ.
ಘಟನೆ ಹಿನ್ನೆಲೆ :
2013 ರ ಜೂನ್ 16ರಂದು ನೆಹರು ಮೈದಾನದಲ್ಲಿ ಕ್ರಿಕೆಟ್ ಆಡುವಾಗ ಯಲ್ಲಾಪುರ ಓಣಿಯ ನಜೀರ್ ಮುದಗಲ್ ಎಂಬುವವರ ಜೊತೆ ಜಗಳವಾಡಿ ಅವರ ಮೇಲೆ ಈ ಆರೋಪಿಗಳು ಹಲ್ಲೆ ನಡೆಸಿದ್ದು, ಅವರ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರು. ಬಳಿಕ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.