ಹುಬ್ಬಳ್ಳಿ : ಖೋಟಾ ನೋಟು ಜಾಲವನ್ನು ಕೇಶ್ವಾಪೂರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಖೋಟಾ ನೋಟು ಜಾಲವನ್ನು ಪತ್ತೆ ಹಚ್ಚಿ, ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಶ್ವಾಪೂರ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಉಪ ಪೊಲೀಸ್ ಆಯುಕ್ತರಾದ ಕೆ.ರಾಮ್‍ರಾಜನ್ ಮತ್ತು ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಕೇಶ್ವಾಪೂರ ಪೊಲೀಸ್ ಠಾಣೆಯ, ಇನ್ಸ್‌ಪೆಕ್ಟರ್ ಸುರೇಶ ಜಿ.ಕುಂಬಾರ ಮತ್ತು ಸಿಬ್ಬಂದಿ ತಂಡವು ಕಾರ್ಯಾಚರಣೆ ನಡೆಸಿ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಗೋಪಿನಾಥ ಜಗನ್ನಾಥ ಹಬೀಬ, ಶ್ರೀನಿವಾಸ ವಾಸಪ್ಪ ತಟ್ಟಿ, ಮೌಲಾಸಾಬ ಮುಕ್ತಂಸಾಬ ಗೂಡಿಹಾಳ, ಸಲಿಂ ಇಮಾಮಸಾಬ ಮುಲ್ಲಾ ಬಂಧಿತ ಆರೋಪಿಗಳು.
ಇವರು 500 ರೂ. ಮುಖ ಬೆಲೆಯ 93 ಖೋಟಾ ನೋಟುಗಳನ್ನು ಹಾಗೂ 100 ರೂ. ಮುಖ ಬೆಲೆಯ 200 ಖೋಟಾ ನೋಟುಗಳನ್ನು ( ಒಟ್ಟು 66,500 ರೂ) ಹಾಗೂ 500 ರೂ. ಮುಖ ಬೆಲೆಯ 10 ಅಸಲಿ ನೋಟುಗಳನ್ನು ಮತ್ತು 100 ರೂ. ಮುಖ ಬೆಲೆಯ 2 ಅಸಲಿ ನೋಟುಗಳನ್ನು ಒಟ್ಟು 5,200ರೂ ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿತರಿಂದ ನಾಲ್ಕು ಮೊಬೈಲ್ ಫೋನ್ ಸಹ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ತನಿಖೆ ಮುಂದುವರೆಸಿದ್ದಾರೆ.
ಓದಿ : ಕರ್ಕಶ ಶಬ್ಧ ಮಾಡಿದ್ರೆ ಹುಷಾರ್.. ಸೈಲೆನ್ಸರ್ಗಳ ಮೇಲೆ ಬುಲ್ಡೋಜರ್ ಹರಿಸಿ ಮಣಿಪಾಲ ಪೊಲೀಸರ ಎಚ್ಚರಿಕೆ..
ಇನ್ನು, ಈ ಪ್ರಕರಣವನ್ನು ಪತ್ತೆ ಹಚ್ಚಿದ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ ಜಿ ಕುಂಬಾರ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.