ಧಾರವಾಡ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಗ್ರಾಮೀಣ ಭಾಗಕ್ಕೂ ವೈರಸ್ ತಗುಲಬಹುದು ಎಂಬ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಡಂಗುರು ಸಾರಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನರೇಂದ್ರ ಗ್ರಾಮ ಪಂಚಾಯತ್ ವತಿಯಿಂದ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಚಹಾ ಅಂಗಡಿ ಬಂದ್ ಮಾಡಬೇಕು. ಯಾರೂ ಧಾರವಾಡ ನಗರಕ್ಕೆ ಹೋಗಬಾರದು. ಗ್ರಾಮದ ನೀರಿನ ಟ್ಯಾಂಕ್ ಬಳಿ ಕಾಯಿಪಲ್ಲೆ ಹರಾಜು ಮಾಡಬೇಕು ಎಂದು ಡಂಗುರ ಸಾರಲಾಗಿದೆ.
ಸೋಮವಾರ ತಾಲೂಕಿನ ಮನಸೂರ ಗ್ರಾಮದ ಜನರು ಬಸ್ ಬಂದ್ ಮಾಡುವಂತೆ ಗ್ರಾಪಂಗೆ ಮನವಿ ಸಲ್ಲಿಸಿದ್ದರು. ಇಂದು ಪಂಚಾಯತ್ ಅಧಿಕಾರಿಗಳು, ಸದಸ್ಯರು ಎಚ್ಚೆತ್ತುಕೊಂಡು ಊರಿನಿಂದ ಯಾರೂ ಹೊರಗೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ನವಲಗುಂದ ತಾಲೂಕಿನ ಕೆಲ ಗ್ರಾಮಗಳಲ್ಲಿ ಕೊರೊನಾ ಹರಡಿದ್ದು, ಧಾರವಾಡ ತಾಲೂಕಿನಲ್ಲಿ ಹರಡಬಾರದು ಎಂಬ ದೃಷ್ಟಿಯಿಂದ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.