ಹುಬ್ಬಳ್ಳಿ : ಡಿಜೆ ಸೌಂಡ್ ಅಬ್ಬರದಿಂದ ಯುವ ಸಮುದಾಯವನ್ನು ಕೇಕೆ ಹಾಕಿ ಕುಣಿಯುವಂತೆ ಮಾಡುತ್ತಿದ್ದ ಗಣೇಶ ಮಹೋತ್ಸವದ ಸಂಭ್ರಮಕ್ಕೆ ಕೊರೊನಾ ಕರಿ ನೆರಳು ಬಿದ್ದಿದೆ. ಸಂಭ್ರಮಾಚರಣೆ ಮಾತ್ರವಲ್ಲ, ಈ ಹಬ್ಬವನ್ನೇ ಜೀವನಾಸರೆಗೆ ನಂಬಿದ್ದ ಎಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಉತ್ತರ ಕರ್ನಾಟಕ ಮೂಲೆಮೂಲೆಗಳಲ್ಲಿ ಹೆಸರುವಾಸಿಯಾಗಿರುವ ಹುಬ್ಬಳ್ಳಿಯ ಗಣೇಶ ಮಹೋತ್ಸವಕ್ಕೆ ರಾಜ್ಯದ ಜನರು ಮಾತ್ರವಲ್ಲದೆ ಅಂತಾರಾಜ್ಯ ಜನರು ಆಗಮಿಸುತ್ತಾರೆ. ಆದರೆ, ಈ ಬಾರಿ ವಿಘ್ನ ವಿನಾಶಕನ ಹಬ್ಬಕ್ಕೆ ವಿಘ್ನ ಆವರಿಸಿದೆ.
ಈಗಾಗಲೇ ಗಣೇಶ ಮೂರ್ತಿ ತಯಾರಕರು ಸಾವಿರಾರು ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ಸಾರ್ವಜನಿಕ ಗಣಪತಿಯನ್ನು ತಯಾರಿಸಿದ್ದು, ಕೊರೊನಾ ಕಾರಣದಿಂದ ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.
ಪ್ರತೀ ಹಬ್ಬಕ್ಕೂ ಕೂಡಾ ಹುಬ್ಬಳ್ಳಿಯ ಪ್ರತಿ ಬೀದಿಯಲ್ಲಿ ಗಣೇಶ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಅಲ್ಲದೇ ವಿಭಿನ್ನ ರೀತಿ ಅಲಂಕಾರ ಮಾಡಿ 11ನೇ ದಿನದಂದು ಅದ್ದೂರಿಯಾಗಿ ಪ್ರತಿಮೆಯನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ, ಈಗ ಗಣೇಶ ಮೂರ್ತಿಗಳನ್ನು ಕೇಳುವವರೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದು, ಅದನ್ನೇ ನಂಬಿದ್ದ ಕುಟುಂಬಗಳು ತಲೆಮೇಲೆ ಕೈಹೊತ್ತು ಕುಳಿತುಕೊಂಡಿವೆ.
ಸರ್ಕಾರ ಹಾಗೂ ಜಿಲ್ಲಾಡಳಿತ ಈವರೆಗೂ ಸಾರ್ವಜನಿಕ ಗಣಪತಿ ಆಚರಣೆ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಗಣೇಶ ಮೂರ್ತಿ ತಯಾರಕರು ಸರ್ಕಾರ ತಗೆದುಕೊಳ್ಳುವ ನಿರ್ಧಾರಕ್ಕೆ ಕಾದು ಕುಳಿತಿದ್ದಾರೆ.