ಧಾರವಾಡ: ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಹೋಂ ಐಸೊಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ಕೊರೊನಾ ಪರೀಕ್ಷೆ ಹೆಚ್ಚಳವಾಗಿದ್ದರಿಂದ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
![Corona cases increased in dharwad](https://etvbharatimages.akamaized.net/etvbharat/prod-images/kn-dwd-7-minister-meeting-av-ka10001_05082020180238_0508f_1596630758_967.jpg)
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಕೋವಿಡ್ ಚಿಕಿತ್ಸೆ ನಿಯಂತ್ರಣ ಮತ್ತು ಜನಜಾಗೃತಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಅಂದಾಜು 554 ಜನ ಸೋಂಕಿತರು ಹೋಂ ಐಸೊಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಕಾಲಕಾಲಕ್ಕೆ ಆರೋಗ್ಯ ತಂಡ ಭೇಟಿ ನೀಡಿ, ಅಗತ್ಯ ಔಷಧಿ, ಆರೋಗ್ಯ ಸಲಹೆ ನೀಡುವಲ್ಲಿ ಹೋಂ ಐಸೊಲೇಷನ್ ತಂಡ ಇನ್ನಷ್ಟು ಕ್ರಿಯಾಶೀಲವಾಗಿರಬೇಕು ಎಂದು ಹೇಳಿದರು.
'ಸೀಲ್‍ಡೌನ್ ಕಠಿಣಗೊಳಿಸಿ'
ಸೋಂಕಿತರು ಪತ್ತೆ ಆಗುವ ಪ್ರದೇಶಗಳ ಸೀಲ್‍ಡೌನ್ ಕಠಿಣಗೊಳಿಸಿ, ಅವಧಿ ಮುಗಿದ ನಂತರ ತಕ್ಷಣ ಸೀಲ್‍ಡೌನ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವರು ಸೂಚನೆ ನೀಡಿದರು.
ಜನರು ಆತಂಕ ಅಥವಾ ಭಯ ಪಡದೆ, ಸರ್ಕಾರ ಸೂಚಿಸಿರುವ ಆರೋಗ್ಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಷಕರಿಗೆ ಗುಣಮಟ್ಟದ ಪಿಪಿಇ ಕಿಟ್, ಮುಖಗವಸು, ಕೈಗವಸು ನೀಡಬೇಕು. ಯಾವುದೇ ಕಂಪನಿ ಕಳಪೆ ಮಟ್ಟದ ಆರೋಗ್ಯ ಪರಿಕರಗಳನ್ನು ಸರಬರಾಜು ಮಾಡಿದರೆ, ತಕ್ಷಣ ಅವುಗಳನ್ನು ತಿರಸ್ಕರಿಸಿ ಸರಬರಾಜುದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಹೆದ್ದಾರಿ ಫಲಕ, ಸರ್ಕಾರಿ ಬಸ್‍ಗಳ ಮೇಲೆ ಕೊರೊನಾ ಜಾಗೃತಿ ಚಿತ್ರ, ಬರಹಗಳನ್ನು ಅಳವಡಿಸಿ, ಹೆಚ್ಚು ಹೆಚ್ಚು ಜನಜಾಗೃತಿಗೆ ಆದ್ಯತೆ ನೀಡಬೇಕು. ಪೌರಕಾರ್ಮಿಕರಿಗೆ ಆರೋಗ್ಯ ರಕ್ಷಾ ಕವಚಗಳನ್ನು ನೀಡಿ, ಅವರು ಸ್ವಚ್ಛತಾ ಕಾರ್ಯ ಮಾಡುವಾಗ ಕಡ್ಡಾಯವಾಗಿ ಧರಿಸುವಂತೆ ಸೂಚಿಸಿ, ಅಧಿಕಾರಿಗಳು ಪರಿಶೀಲಿಸಬೇಕೆಂದು ಹೇಳಿದರು.
ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ದಂಡ ವಿಧಿಸುವ ಕೆಲಸ ನಗರ ಪ್ರದೇಶದಲ್ಲಿ ಉತ್ತಮವಾಗಿದ್ದು, ಗ್ರಾಮೀಣ ಭಾಗದಲ್ಲಿಯೂ ದಂಡ ವಿಧಿಸುವ ಕಾರ್ಯ ಹೆಚ್ಚಿಸಬೇಕು. ಗ್ರಾಮೀಣ ಪೊಲೀಸರು ಹೆಚ್ಚು ಗಮನಹರಿಸುವಂತೆ ಎಸ್‍ಪಿ ಹಾಗೂ ಡಿವೈಎಸ್‍ಪಿ ಸೂಕ್ತ ಕ್ರಮ ಜರುಗಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಸೋಂಕಿತರಿಗೆ 10 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಿಡುಗಡೆಯಾದ ಬಳಿಕ 14 ದಿನಗಳವರೆಗೆ ಹೋಂ ಐಸೊಲೇಷನ್ ಕಡ್ಡಾಯವಿದೆ. ಹೋಂ ಐಸೊಲೇಷನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಿಸಿ, ಎಫ್‍ಐಆರ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಶಾಸಕ ಅಮೃತ ದೇಸಾಯಿ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಉಪಸ್ಥಿತರಿದ್ದರು.