ಹುಬ್ಬಳ್ಳಿ: ನಗರದಲ್ಲಿ ದಿನೇ ದಿನೇ ಕೊರೊನಾ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ ಎರಡು ದಿನಗಳ ಹಿಂದೆ ಮೂರು ಸಾವಿರ ಮಠದ ಆವರಣವನ್ನು ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಬೆಂಡಿಗೇರಿ ಪೊಲೀಸ್ ಠಾಣೆಗೂ ಕೊರೊನಾ ವೈರಸ್ ಕಾಲಿಟ್ಟಿದೆ.
ಹೌದು. ಕಳೆದ ವಾರವಷ್ಟೇ ಭಿಕ್ಷುಕಿಯೊಬ್ಬಳನ್ನು ನಿರ್ಗತಿಕ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸೇರಿಸಿದ್ದಕ್ಕಾಗಿ ಮೂವರು ಪೋಲಿಸ್ ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮೊನ್ನೆ ಇದೆ ಠಾಣೆಯ ಹೋಮ್ ಗಾರ್ಡ್ ಒಬ್ಬರಿಗೆ ಕೊರೊನಾ ಧೃಡಪಟ್ಟಿದ್ದರಿಂದ ಇದೀಗ ಮತ್ತೆ ನಾಲ್ಕು ಜನ ಸಿಬ್ಬಂದಿಯನ್ನು ಹೊಮ್ ಕ್ವಾರಂಟೈನ್ ಮಾಡಲಾಗಿದೆ.
ಬೆಂಡಿಗೇರಿ ಪೋಲಿಸ್ ಠಾಣೆಯ ಒಟ್ಟು 7 ಜನ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೋಲಿಸ್ ಠಾಣೆಯ ಒಳಗಡೆ ಹೋಗುವುದನ್ನು ನಿಷೇಧಿಸಲಾಗಿದೆ. ಅಷ್ಟೇಯಲ್ಲ ಬೆಂಡಿಗೇರಿ ಠಾಣೆಯನ್ನು ಹೊರ ಠಾಣೆಯಾಗಿ ಮಾರ್ಪಡಿಸಲಾಗಿದೆ.
ಸಿಬ್ಬಂದಿಗಳೆಲ್ಲ ಪೋಲಿಸ್ ಠಾಣೆಯ ಹೊರಗಡೆ ಕುಳಿತುಕೊಂಡು ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಇಂದು ಇಡೀ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಯಿತು.