ಹುಬ್ಬಳ್ಳಿ: ಕೊರೊನಾ ಸೋಂಕಿತ ವ್ಯಕ್ತಿಯಿಂದ ಮಾ.27 ರಂದು ಆಹಾರ ಧಾನ್ಯ ವಿತರಣೆ ಪಡೆದವರು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.
ಕೋವಿಡ್ 19 ಸೋಂಕಿತರಾಗಿರುವ ನಗರದ ಮುಲ್ಲಾ ಓಣಿಯ ವ್ಯಕ್ತಿಯೊಬ್ಬರು(ರೋಗಿ ನಂಬರ್-236) ತಮ್ಮ ಗೆಳೆಯರು, ಬಂಧುಗಳ ಜೊತೆಗೂಡಿ ಮಾ. 27ರಂದು ಡಾಕಪ್ಪಾ ಸರ್ಕಲ್ ನಿಂದ ಕಾಳಮ್ಮನ ಅಗಸಿಯವರೆಗೆ ವಾಸ್ತವ್ಯ ಹೊಂದಿರುವ ಸಾರ್ವಜನಿಕರಿಗೆ 5 ಕೆಜಿ ಅಕ್ಕಿ , 2 ಕೆಜಿ ತೊಗರಿಬೇಳೆ, 1 ಕೆಜಿ ಸಕ್ಕರೆ, 2 ಕೆಜಿ ಗೋಧಿ, ಚಹಾಪುಡಿ ವಿತರಿಸಿದ್ದಾರೆ ಎಂದು ಪರಿಶೀಲನೆ ವೇಳೆ ದೃಢ ಪಟ್ಟಿದೆ.
ಈ ಸಂಬಂಧ ಆಹಾರ ಧಾನ್ಯ ಪಡೆದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಸಂಬಂಧಪಟ್ಟವರು ಕೂಡಲೇ ಕೊರೊನಾ ಸಹಾಯವಾಣಿ 1077 ಕರೆಮಾಡಿ ಪರೀಕ್ಷೆಗೆ ಒಳಪಡಬೇಕು ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.