ಧಾರವಾಡ: ಕೆಲವು ದಿನಗಳಿಂದ ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಸುಮಾರು 30 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 5 ಕುರಿ ಮರಿಗಳ ಜೀವ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ. ನಿರಂತರ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ 13 ಮನೆಗಳು, ಹುಬ್ಬಳ್ಳಿ ಗ್ರಾಮೀಣದಲ್ಲಿ 3, ಅಳ್ನಾವರ ತಾಲೂಕಿನ 3, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 2, ಕುಂದಗೋಳ ತಾಲೂಕಿನಲ್ಲಿ 2 ಮತ್ತು ಕಲಘಟಗಿ ತಾಲೂಕಿನಲ್ಲಿ 7 ಮನೆಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.
ಗೋಡೆ ಕುಸಿದು ಐದು ಕುರಿಮರಿಗಳು ಸಾವು: ನಿನ್ನೆ ರಾತ್ರಿ ನಿರಂತರ ಮಳೆ ಸುರಿದ ಪರಿಣಾಮ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದ ಶಿವನಗೌಡ ಹೊಳೆಪ್ಪಗೌಡ ಪಾಟೀಲ ಅವರ ಮನೆ ಗೋಡೆ ಕುಸಿದು 5 ಕುರಿಮರಿಗಳ ಜೀವಹಾನಿ ಆಗಿದೆ. ಈ ಎಲ್ಲ ಪ್ರಕರಣಗಳ ಕುರಿತಾಗಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತಾಲೂಕಿನ ತಹಸೀಲ್ದಾರರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಮಳೆಯಿಂದ ಹಾನಿಗೊಂಡಿರುವ ಮನೆಗಳನ್ನು ಶೀಘ್ರ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸಲು ಸರ್ಕಾರದ ನಿಯಮಾವಳಿಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ಕುಸಿದು ಬಿದ್ದು ಒಂದೇ ಕುಟುಂಬದ 13 ಮಂದಿಗೆ ಗಾಯ: ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಗೆ ಮನೆಯೊಂದು ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ 13 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಶುಕ್ರವಾರ ಮನೆಯ ಸದಸ್ಯರೆಲ್ಲ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದರು. ಈ ವೇಳೆ, ಏಕಾಏಕಿ ಮನೆಯ ಛಾವಣಿ ಕುಸಿದು ಬಿದ್ದಿದೆ. ಸದ್ದು ಕೇಳಿ ಮನೆಯಿಂದ ಹೊರ ಓಡಿ ಬರುತ್ತಿದ್ದಂತೆ ಮನೆಯ ಗೋಡೆಯೂ ಕುಸಿದಿದೆ. ಗೋಡೆಗಳು ಕುಸಿಯುತ್ತಿದ್ದಂತೆ ಸಂಪೂರ್ಣ ಮನೆಯೇ ನೆಲಸಮವಾಗಿದೆ. ಈ ವೇಳೆ ವೃದ್ಧೆ ಈರಮ್ಮ ಪತ್ರೆಪ್ಪನವರ (95), ಸುಮಂತ ಪತ್ರೆಪ್ಪನವರ (8), ಸಂಬಂಧಿ ಬಸವಣ್ಣೆಪ್ಪ ತಡಕೋಡ (55), ಶಂಕರೆಪ್ಪ ಪತ್ರೆಪ್ಪನವರ (50), ವಿನಾಯಕ ಪತ್ರೆಪ್ಪನವರ (15), ಪಾರವ್ವ ಪತ್ರೆಪ್ಪನವರ (55) ಅವಶೇಷಗಳಡಿ ಸಿಲುಕಿದ್ದಾರೆ. ಮನೆ ಬಿದ್ದ ಸದ್ದು ಕೇಳಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಕ್ಕಪಕ್ಕದ ಮನೆಯವರು ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ತಾಪಂ ಇಒ, ಪಿಡಿಒ, ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ: ಮಲೆನಾಡು ಭಾಗದಲ್ಲಿ ಮಳೆ, ತುಂಗಭದ್ರಾ ನದಿಗೆ ಬಂತು ಜೀವಕಳೆ...!