ಹುಬ್ಬಳ್ಳಿ : ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಟೊಮೆಟೊಗೆ ಬಂಗಾರದ ಬೆಲೆ ಬರುತ್ತಿದ್ದಂತೆ ಗ್ರಾಹಕರು ಕೂಡ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.
ಟೊಮೆಟೊ ಹಣ್ಣಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಈ ಹಿನ್ನೆಲೆ ದುಬಾರಿ ಬೆಲೆ ಕೊಟ್ಟು ಟೊಮೆಟೊ ಕೊಂಡುಕೊಳ್ಳಲು ಗ್ರಾಹಕರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಾರ್ವಜನಿಕರು, ಅಡುಗೆಗೆ ಟೊಮೆಟೊ ಬದಲು ನಿಂಬೆಹಣ್ಣಿನ ಮೊರೆ ಹೋಗಿದ್ದಾರೆ. ಇದರಿಂದ ನಿಂಬೆ ಹಣ್ಣಿಗೂ ಬೇಡಿಕೆ ಹೆಚ್ಚಾಗಿದೆ.
ನಗರದಲ್ಲಿ ಕೆಜಿ ಬೆಂಡೆಕಾಯಿಗೆ 80 ರೂಪಾಯಿ, ಮೆಣಸಿನಕಾಯಿ 100 ರೂಪಾಯಿ, ಬಜ್ಜಿ ಮೆಣಸಿನಕಾಯಿ 60 ರೂಪಾಯಿ, ಶುಂಠಿ(ಕೆಜಿ) 400 ರೂಪಾಯಿ, ಮೂಲಂಗಿ 40 ರೂಪಾಯಿ, ಆಲೂಗಡ್ಡೆ 40 ರೂಪಾಯಿ, ನವಿಲುಕೋಸು 60 ರೂಪಾಯಿ, ಬೀನ್ಸ್ 180 ರೂಪಾಯಿ, ಹಾಗಲಕಾಯಿ 50 ರೂಪಾಯಿ, ಬೆಳ್ಳುಳ್ಳಿ(ಕೆಜಿ) 300 ರೂಪಾಯಿ ಆಗಿದೆ. ಇದರ ಜೊತೆ ಕೆಂಪು ಸುಂದರಿ ಟೊಮೆಟೊ ಬೆಲೆ ಕೆಜಿಗೆ 150 ರೂಪಾಯಿ ಆಗಿದೆ. ಇದರಿಂದ ಕಂಗಾಲಾಗಿರುವ ಗ್ರಾಹಕರು, ಈಗ ಟೊಮೆಟೊ ಬದಲು ಪರ್ಯಾಯವಾಗಿ ನಿಂಬೆಹಣ್ಣಿನ ಮೊರೆ ಹೋಗಿದ್ದು, ದುಬಾರಿ ತರಕಾರಿಯಿಂದ ಗ್ರಾಹಕರು ವಿಮುಖರಾಗಿದ್ದಾರೆ.
ನಿಂಬೆಹಣ್ಣಿನ ಮೊರೆ ಹೋದ ಗ್ರಾಹಕರು: ಇತ್ತೀಚಿಗೆ ಹುಣಸೆ ಹಣ್ಣು ಸಹ ದುಬಾರಿಯಾಗಿದೆ. ಇದರಿಂದ ಮಹಿಳೆಯರು ಟೊಮೆಟೊನೂ ಬೇಡ, ಹುಣಸೆ ಹಣ್ಣು ಬೇಡ, ಅದರ ಬದಲು ಹುಳಿ ಹುಳಿ ನಿಂಬೆಹಣ್ಣಿನ ಮೊರೆ ಹೋಗ್ತಿದ್ದಾರೆ. ಈಗ ಮಳೆಗಾಲ ಇರುವ ಕಾರಣ ನಿಂಬೆ ಹಣ್ಣು ಬೆಲೆ ತುಂಬಾ ಕಡಿಮೆ, ಎರಡು ರೂಪಾಯಿಗೆ ನಿಂಬೆಹಣ್ಣು ಸಿಗುತ್ತಿದೆ ಅಂತ ಚಿತ್ರಾನ್ನದಿಂದ ಹಿಡಿದು ಕೆಲವು ಅಡುಗೆಗೆ ನಿಂಬೆಹಣ್ಣಿನ ಹುಳಿ ಬಳಸುತ್ತಿದ್ದಾರೆ. ಹುಳಿರಾಣಿ ಟೊಮೆಟೊ ಬದಲು ಗೃಹಿಣಿಯರು ಈಗ ಹುಳಿರಾಜ ನಿಂಬೆಹಣ್ಣಿನ ಮೊರೆ ಹೋಗಿದ್ದು, ಅಡುಗೆಗೆ ನಿಂಬೆಹಣ್ಣನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.
ಒಂದು ಮುಕ್ಕಾಲು ಎಕರೆ ಟೊಮೆಟೊ ಬೆಳೆ ನಾಶ : ಇನ್ನೊಂದೆಡೆ ದೇಶಾದ್ಯಂತ ದಿನ ದಿನಕ್ಕೂ ಟೊಮೆಟೊ ದರ ಗಗನಕ್ಕೆ ಏರುತ್ತಿದೆ. ಇದರಿಂದಾಗಿ ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೊಂದೆಡೆ ಟೊಮೆಟೊ ಬೆಳೆದ ರೈತರು ಭಾರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಬೆನ್ನಲ್ಲೇ ದ್ವೇಷ ಹಾಗೂ ಇನ್ನಿತರ ಕಾರಣಗಳಿಂದ ಕಿಡಿಗೇಡಿಗಳು ಒಂದು ಮುಕ್ಕಾಲು ಎಕರೆ ಟೊಮೆಟೊ ಬೆಳೆಯನ್ನು ನಾಶಪಡಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಮಲೆಯೂರು ಸಮೀಪದ ಕೆಬ್ಬೇಪುರ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ರೈತ ಮಂಜು ಎಂಬುವರಿಗೆ ಸೇರಿದ ಅಂದಾಜು 20 ಲಕ್ಷ ರೂ. ಮೌಲ್ಯದ ಟೊಮೆಟೊ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ. ಜಮೀನಿನಲ್ಲಿ ಟೊಮೆಟೊ ನೆಲ ಕಚ್ಚಿದ್ದನ್ನು ಕಂಡ ರೈತ ಮಂಜು, ಬೆಳೆ ಮಧ್ಯೆ ಬಿದ್ದು ಹೊರಳಾಡಿ ಆಕ್ರಂದನ ಹೊರಹಾಕಿದರು. ಈ ಸಂಬಂಧ ಬೇಗೂರು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಲಕ್ಷಾಂತರ ರೂ. ಮೌಲ್ಯದ ಟೊಮೆಟೊ ನಾಶ: ಹೊಲದಲ್ಲಿ ಬಿದ್ದು ಹೊರಳಾಡಿದ ರೈತ