ಧಾರವಾಡ: ಕಳಪೆ ಗುಣಮಟ್ಟದ ಬೀಜ ಪೂರೈಕೆಯ ಕುರಿತಾಗಿ ರೈತರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನು ಗ್ರಾಹಕರ ಆಯೋಗವು ತಿರಸ್ಕರಿಸಿದೆ.
ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ರೈತರು 2019-20 ರ ಹಿಂಗಾರಿನಲ್ಲಿ ಕಡಲೆ ಬೆಳೆಯಲು ನಿರ್ಧರಿಸಿದ್ದರು. ರಾಷ್ಟ್ರೀಯ ಬೀಜೋತ್ಪಾದನಾ ನಿಗಮ ಪೂರೈಸಿದ ಕಡಲೆ ಬೀಜಗಳನ್ನು ಖರೀದಿಸಿ ತಮ್ಮ ಹೊಲದಲ್ಲಿ ಬಿತ್ತಿದ್ದರು. ಕಡಲೆ ಫಸಲಿಗೆ ನಂತರ ಸಿಡಿರೋಗ ತಗುಲಿದ್ದು ಬೆಳೆಗೆ ಶೇ.80 ರಿಂದ ಶೇ.90 ರಷ್ಟು ಹಾನಿಯಾಗಿತ್ತು.
ರಾಷ್ಟೀಯ ಬೀಜೋತ್ಪಾದನಾ ಸಂಸ್ಥೆಯವರು ಕಳಪೆ ಗುಣಮಟ್ಟದ ಬೀಜಗಳನ್ನು ಪೂರೈಸಿದ್ದಾರೆ. ಸೇವಾ ನ್ಯೂನತೆ ಎಸಗಿ ಮಾನಸಿಕ, ದೈಹಿಕ ಮತ್ತು ಆರ್ಥಿಕ ಹಾನಿ ಉಂಟುಮಾಡಿದ್ದಾರೆ. ನಮಗೆ 10 ಲಕ್ಷ ರೂ ನಷ್ಟ ಭರ್ತಿ ಮತ್ತು ಪರಿಹಾರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ರೈತರು ದೂರು ಸಲ್ಲಿಸಿದ್ದರು.
ನಾವು ಪೂರೈಸಿದ ಬೀಜಗಳಿಂದ ನೇಗಿನಹಾಳ, ಉಣಕಲ್ ಹಾಗೂ ಸುಳ್ಳ ಗ್ರಾಮದ ರೈತರು ಉತ್ತಮ ಇಳುವರಿ ಪಡೆದಿದ್ದಾರೆ. ಆದರೆ ಈ ರೈತರು ಹಾಕಿದ ಬೀಜ ಉತ್ತಮ ಮೊಳಕೆ ಬಂದು ಗಿಡವಾಗಿ ಬೆಳೆದಾಗ ಅದಕ್ಕೆ ಸಿಡಿರೋಗ ಬಂದಿದೆ. ಸ್ಥಾನಿಕ ಚವಕಶಿ ಮಾಡಿ ಸಿಡಿರೋಗ ತಡೆಯಲು ಹತೋಟಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರೈತರಿಗೆ ಸೂಚಿಸಿದ್ದೆವು. ಆದರೆ ರೈತರು ಅಂತಹ ಮುಂಜಾಗ್ರತಾ ಕ್ರಮ ಕೈಗೊಳ್ಳದ್ದರಿಂದ ಅವರಿಗೆ ಉತ್ತಮ ಫಸಲು ಬಂದಿಲ್ಲ. ಬದಲಾಗಿ ನಾವು ಸರಬರಾಜು ಮಾಡಿದ ಬೀಜ ಕಾರಣ ಅಲ್ಲ ಎಂದು ರಾಷ್ಟೀಯ ಬೀಜೋತ್ಪಾದನಾ ಸಂಸ್ಥೆ ಆಕ್ಷೇಪಿಸಿತ್ತು.
ಈ ದೂರುಗಳ ಬಗ್ಗೆ ಕೂಲಂಕಷವಾಗಿ ಆಯೋಗವು ವಿಚಾರಣೆ ನಡೆಸಿದೆ. ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಅವರು ರೈತರುಗಳಿಗಾದ ಬೆಳೆ ಹಾನಿಗೆ ಸಿಡಿರೋಗ ಕಾರಣವಾಗಿದೆ. ಆ ರೋಗ ಮಣ್ಣಿನಿಂದ ಉದ್ಭವಿಸಿದೆ. ರಾಷ್ಟೀಯ ಬೀಜೋತ್ಪಾದನಾ ನಿಗಮ ಪೂರೈಸಿದ ಬೀಜದಿಂದ ಅಲ್ಲ ಎಂಬುದು ದಾಖಲೆಗಳ ಆಧಾರದಿಂದ ಕಂಡುಬಂದಿದೆ. ರೈತರು ರೋಗದ ಹತೋಟಿಗೆ ಕ್ರಮ ಕೈಗೊಳ್ಳದ್ದರಿಂದ ಹಾನಿ ಆಗಿದ್ದು ರಾಷ್ಟೀಯ ಬೀಜೋತ್ಪಾದನಾ ನಿಗಮದವರು ಕಾರಣರಲ್ಲ ಎಂದು ದೂರುಗಳನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಅಕಾಲಿಕ ಮಳೆ, ಬೆಲೆ ಕುಸಿತ: ತಾನೇ ಬೆಳೆದ ಬೆಳೆ ಕೈಯಾರೆ ನಾಶಪಡಿಸಿದ ರೈತ