ಹುಬ್ಬಳ್ಳಿ:ಶಾಲೆಗಳು ಎಂದರೆ, ಮಕ್ಕಳ ಬದುಕನ್ನು ಸುಂದರವಾಗಿ ನಿರ್ಮಿಸುವ ಮಂದಿರಗಳು. ಆದ್ರೆ, ಹುಬ್ಬಳ್ಳಿಯಲ್ಲಿರುವ ನೇಕಾರ ನಗರದಲ್ಲಿ ಅಮರಜ್ಯೋತಿ ಎಂಬ ಕಾನ್ವೆಂಟ್ ಶಾಲೆಯೇ ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ.
ಈ ಶಾಲಾ ಕಟ್ಟಡದ ಮೇಲೆ ಬರೋಬ್ಬರಿ 3 ಟವರ್ ಕಂಬಗಳನ್ನು ಹಾಕಲಾಗಿದ್ದು, ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೇವಲ ಒಂದು ಟವರ್ ಕಂಬದಲ್ಲಿ ಪ್ರತಿ ಕ್ಷಣಕ್ಕೆ ಲಕ್ಷಾಂತರ ತರಂಗಾಂತರಗಳು ಹಾದು ಹೋಗುತ್ತವೆ. ಇನ್ನು 3 ಟವರ್ ಕಂಬಗಳಿಂದ ಲಕ್ಷಾಂತರ ತರಂಗಗಳು ಪ್ರವಹಿಸುತ್ತವೆ. ಇದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರ ಅರಿವು ಶಾಲಾ ಆಡಳಿತ ಮಂಡಳಿಗೆ ಇದ್ದರೂ ತಲೆಕೆಡಿಸಿಕೊಂಡಿಲ್ಲ. ಸರ್ಕಾರಿ ಅಥವಾ ಖಾಸಗಿ ಶಾಲೆಯ ಮೇಲೆ ಹಾಗೂ ಅದರ ಆವರಣದಲ್ಲಿ ಮೊಬೈಲ್ ಟವರ್ ಕಂಬಗಳನ್ನು ಹಾಕಲು ಪರವಾನಗಿ ಇಲ್ಲ. ಆದರೂ ಇಲ್ಲಿನ ಶಾಲೆಗೆ ಮಾತ್ರ ಇದ್ಯಾವುದೇ ಕಾನೂನು ಅನ್ವಯಿಸುವುದಿಲ್ಲ. ಹೀಗಾಗಿ ಇಲ್ಲಿ ಶಿಕ್ಷಣ ಇಲಾಖೆ ಕೇವಲ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತಹ ರೀತಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಈ ಶಾಲೆ ಖಾಸಗಿ ಶಾಲೆಯಾಗಿರುವುದರಿಂದ ಪ್ರತಿ ವರ್ಷ ಇದರ ತಪಾಸಣೆ ಇಲ್ಲಿನ ಶಿಕ್ಷಣಾಧಿಕಾರಿಗಳು ಮಾಡುತ್ತಾರೆ. ಆದ್ರೆ, ಈ ಶಾಲೆಯ ಮೇಲೆ ಇರುವ 3 ಟವರ್ ಕಂಬಗಳನ್ನು ನೋಡಿಯೂ ಕೂಡ ಶಾಲೆಗೆ ಪರವಾನಗಿಯನ್ನು ಯಾವ ರೀತಿ ಕೊಟ್ಟಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಶಾಲೆಯ ಪರವಾನಗಿಯನ್ನು ಪ್ರತಿ ವರ್ಷವೂ ಕೂಡಾ ನವೀಕರಿಸಬೇಕು. ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯ ಮೇಲಿರುವ ದೈತ್ಯ ಆಕಾರದ 3 ಟವರ್ ಕಂಬಗಳು ಅಧಿಕಾರಿಗಳ ಕಣ್ಣಿಗೆ ಕಂಡಿಲ್ಲವೋ ಅಥವಾ ಹಣ ಅಧಿಕಾರಿಗಳ ಜೇಬು ಸೇರಿದಿಯೋ ಅದಕ್ಕೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಉತ್ತರಿಸಬೇಕಿದೆ.ಇನ್ಮುಂದೆಯಾದ್ರೂ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕಿದೆ.