ಧಾರವಾಡ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಬಿಡುಗಡೆಗೊಳಿಸಿದೆ. ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಜಿಲ್ಲೆಯಿಂದ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಟಿಕೆಟ್ ನೀಡಿದ್ದು, ಚುನಾವಣಾ ಕಣ ರಂಗೇರುವಂತೆ ಮಾಡಿದೆ. ವಿನಯ್ ಕುಲಕರ್ಣಿ ಜಿಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಜಿಲ್ಲೆಯಿಂದ ಹೊರಗಿದ್ದಾರೆ. ಈಗ ಚುನಾವಣೆಗೆ ಪಕ್ಷದ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಜಿಲ್ಲಾ ಪ್ರವೇಶಕ್ಕೆ ಅವಕಾಶ ನೀಡುವಂತೆ ವಿನಯ್ ಮನವಿ ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರು ತಲೆ ಕೆಟ್ಟು ಸುದೀಪ್ ವಿಚಾರದಲ್ಲಿ ಏನೇನೋ ಮಾತನಾಡುತ್ತಿದ್ದಾರೆ: ಬಿಎಸ್ವೈ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಿಂದ ನಿಲ್ಲುವಂತೆ ವಿನಯ್ಗೆ ಕಾಂಗ್ರೆಸ್ ನಾಯಕರು ಒತ್ತಡ ಹಾಕಿದ್ದರು. ಆದರೆ, ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟ ಕಾರಣ, ಅದೇ ಕ್ಷೇತ್ರಕ್ಕೇ ಟಿಕೆಟ್ ಘೋಷಿಸಲಾಗಿದೆ. ಮತ್ತೊಂದೆಡೆ, ವಿನಯ್ ಅಭಿಮಾನಿಗಳು ಸಹ ಕಳೆದ ಕೆಲ ದಿನಗಳ ಹಿಂದೆ ನಿವಾಸದ ಮುಂದೆ ಒಂದು ದಿನ ಪ್ರತಿಭಟನೆ ಮಾಡಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ದೂರು ಇದ್ದರೂ, ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟು ಮಣೆ ಹಾಕಲಾಗಿದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿ ಅಮೃತ್ ಅಯ್ಯಪ್ಪ ದೇಸಾಯಿ ವಿರುದ್ಧ 53,453 ಮತಗಳನ್ನು ಪಡೆದು ವಿನಯ್ ಜಯ ಸಾಧಿಸಿದ್ದರು. ನಂತರದ 2018ರ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಮೃತ್ ಅಯ್ಯಪ್ಪ ದೇಸಾಯಿ 85,133 ಮತಗಳ ಪಡೆದು ಗೆಲುವು ಕಂಡಿದ್ದರು. ವಿನಯ್ 64,783 ಮತಗಳ ಪಡೆದು 20,340 ಮತಗಳ ಅಂತರದಿಂದ ಸೋತಿದ್ದರು.
ಟಿಕೆಟ್ ಸಿಕ್ಕರೂ ವಿನಯ್ಗೆ ಬಂಡಾಯದ ಬಿಸಿ?: ಹಲವು ಊಹಾಪೋಹಗಳ ಮಧ್ಯೆ ಗ್ರಾಮೀಣ ಕ್ಷೇತ್ರದ ಟಿಕೆಟ್ ಉಳಿಸಿಕೊಳ್ಳಲ್ಲಿ ವಿನಯ್ ಕುಲಕರ್ಣಿ ಯಶಸ್ವಿಯಾಗಿದ್ದಾರೆ. ಆದರೆ, ಈ ಕ್ಷೇತ್ರದಿಂದ ಇಸ್ಮಾಯಿಲ್ ತಮಟಗಾರ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಿಲ್ಲೆಯಲ್ಲಿ ಓರ್ವ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಲು ಒತ್ತಾಯ ಮಾಡಿದ್ದ ಇಸ್ಮಾಯಿಲ್ ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಾಳೆ ಧಾರವಾಡಕ್ಕೆ ವಾಪಸ್ ಬರುವ ಸಾಧ್ಯತೆ ಇದ್ದು, ತಮ್ಮ ಮುಂದಿನ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.
ಸಂತೋಷ್ ಲಾಡ್ಗೆ ಕಲಘಟಗಿ ಕ್ಷೇತ್ರದ ಟಿಕೆಟ್: ಜಿಲ್ಲೆಯ ಮತ್ತೊಂದು ಕ್ಷೇತ್ರ ಕಲಘಟಗಿಗೂ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಮಾಜಿ ಸಚಿವ ಸಂತೋಷ ಲಾಡ್ ಅವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲಿ ಕೂಡ ನಾಗರಾಜ ಚೆಬ್ಬಿ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಕೊನೆಗೆ ಲಾಡ್ ಅವರಿಗೆ ಕ್ಷೇತ್ರದ ಟಿಕೆಟ್ ಕೊಡಲಾಗಿದೆ.
ಕಲಘಟಗಿ ಮತಕ್ಷೇತ್ರದಲ್ಲಿ ಸಂತೋಷ್ ಲಾಡ್ 2008 ಮತ್ತು 2013ರ ಚುನಾವಣೆಯಲ್ಲಿ ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂಸಿ ನಿಂಬಣ್ಣವರ್, 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧೆ ಮಾಡಿ ಸಂತೋಷ್ ಲಾಡ್ ವಿರುದ್ಧ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿದ್ದ ಎಂಸಿ ನಿಂಬಣ್ಣವರ್ ಅವರು ಸಂತೋಷ್ ಲಾಡ್ ಅವರನ್ನು ಸೋಲಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ