ಹುಬ್ಬಳ್ಳಿ (ಧಾರವಾಡ): ಭ್ರಷ್ಟಾಚಾರ ಕುರಿತು ವೇದಿಕೆ ಸಿದ್ಧ ಮಾಡಿ. ನನ್ನ ಜೊತೆ ಚರ್ಚೆ ಮಾಡಲು ಸರಿಸಮಾನರು ಬೇಕು. ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿಗೆ ಸವಾಲೆಸೆದರು.
ಪ್ರತಿಭಟನೆ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣ ವಿಚಾರವಾಗಿ ಸೋನಿಯಾ ಗಾಂಧಿ ಇಡಿ ವಿಚಾರಣೆ ಎದುರಿಸುತ್ತಿದ್ದು, ಇದನ್ನು ಖಂಡಿಸಿ ಇಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿ ಚೆನ್ನಮ್ಮ ವೃತ್ತದವರೆಗೆ ನಡೆಯಿತು.
ಪ್ರತಿಭಟನೆಯಲ್ಲಿ ಹಿರಿಯ ನಾಯಕರು, ಯುವ ಮುಖಂಡರು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡು ಬೆಂಬಲ ನೀಡಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಹುಬ್ಬಳ್ಳಿ-ಧಾರವಾಡ ಸಿಎಂ ತವರು ಜಿಲ್ಲೆ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿಯವರ ಜಿಲ್ಲೆಯಿದು. ಭ್ರಷ್ಟಾಚಾರ ಇಲ್ಲಿ ತಾಂಡವವಾಡುತ್ತಿದೆ. ಅದಕ್ಕೆ ಇಲ್ಲಿ ಕೂಡಿರುವ ಜನರೇ ಸಾಕ್ಷಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಮಾನಸಿಕ ಕಿರುಕುಳ ನೀಡುವ ಉದ್ದೇಶದಿಂದ ಇಡಿ ವಿಚಾರಣೆ ಮಾಡಲಾಗುತ್ತಿದೆ. ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದೆ. ಇಂತಹ ಕುಟುಂಬಕ್ಕೆ ಪ್ರಧಾನಿ ಮೋದಿ ಅಪಕೀರ್ತಿ ತರಲು ಯತ್ನಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಆಪರೇಷನ್ ಕಮಲದ ಬಗ್ಗೆ ಯಾಕೆ ಇಡಿ ತನಿಖೆ ಮಾಡ್ತಿಲ್ಲ?: ಈಶ್ವರ ಖಂಡ್ರೆ
ಕೇಂದ್ರ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅವರದೇ ಪಕ್ಷದಲ್ಲಿ ಶೇ 40 ಕಮಿಷನ್ ಆರೋಪವಿದೆ. ಇದನ್ನು ಮೊದಲು ತನಿಖೆ ಮಾಡಲಿ. ಅದನ್ನು ಬಿಟ್ಟು ಸೇಡಿನ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಚರ್ಚೆಗೆ ಸಿದ್ಧ: ಇನ್ನೂ ಸಚಿವ ಸುಧಾಕರ್ ಭ್ರಷ್ಟಾಚಾರ ಕುರಿತು ವೇದಿಕೆ ಸಿದ್ಧ ಮಾಡಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸುಧಾಕರ್ ಅಥವಾ ಮತ್ತೋರ್ವರು ನನಗೆ ಏನೂ ಅಲ್ಲ. ನನ್ನ ಜೊತೆಗಿನ ಚರ್ಚೆಗೆ ಸರಿಸಮಾನರು ಬೇಕು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಹಿರಂಗ ಚರ್ಚೆ ಬಂದರೆ ನಾನು ಸಿದ್ಧ. ಯಾವುದೇ ಸಮಯಕ್ಕೆ, ಎಲ್ಲಿಗೇ ಕರೆದರೂ ಚರ್ಚೆಗೆ ಸಿದ್ಧ. ಬಹಿರಂಗ ವೇದಿಕೆಯನ್ನು ಯಾರೇ ಸಜ್ಜು ಮಾಡಿದ್ರೂ ನಾನು ಚರ್ಚೆಗೆ ಬರಲು ಸಿದ್ಧ ಎಂದು ಸವಾಲು ಹಾಕಿದರು.