ಹುಬ್ಬಳ್ಳಿ : ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ರ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಕಾಂಕ್ಷಿಯಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಪಾಲಿಕೆ ಹಿರಿಯ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರು ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ರಲ್ಲಿ ಜೆಡಿಎಸ್ ಪಕ್ಷವನ್ನು ಬಿಟ್ಟು ಅಂದಿನ ಸಿಎಂ ಆಗಿದ್ದ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನನ್ನ ಬೆಂಬಲಿಗರ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, ಪಕ್ಷದ ಮುಖಂಡರು ನೀಡಿದ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ.
ಈಗಾಗಲೇ ಪಕ್ಷ ಸಂಘಟನೆ ಮಾಡುತ್ತಾ ಬಂದಿದ್ದೇನೆ. 2021 ಹಾನಗಲ್ ಉಪ ಚುನಾವಣೆಯಲ್ಲಿ ವೀಕ್ಷಕರಾಗಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ್ದೇನೆ. 2022 ರಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ವೀಕ್ಷಕರಾಗಿ ಕರ್ತವ್ಯ ನಿಭಾಯಿಸಿದ್ದೇನೆ. ಈಗಾಗಲೇ ನಮ್ಮ ಪಕ್ಷದ ಮುಖಂಡರು ನನಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದು, ಅದರಂತೆ ನಡೆದುಕೊಳ್ಳುವ ಭರವಸೆ ಇದೆ ಎಂದರು.
ಈಗಾಗಲೇ ನಾನು ಮೂರು ಬಾರಿ ಸತತವಾಗಿ ಪಾಲಿಕೆ ಸದಸ್ಯರಾಗಿ, 7 ಬಾರಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಅನುಭವವಿದೆ. ಅಲ್ಲದೇ 2018 ರಲ್ಲಿ ಹು-ಧಾ ಪಶ್ಚಿಮ ಭಾಗದ ಮತ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದೆ. ಆಗ ಕಾಂಗ್ರೆಸ್ ನಾಯಕರು ನನಗೆ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡರು.
ಪಕ್ಷದಲ್ಲಿ ಯೋಗ್ಯ ಸ್ಥಾನಮಾನ ಕೊಡುವ ಭರವಸೆ ನೀಡಿದರು. ಇದೀಗ ಬರುವ ವಿಧಾನಸಭಾ ಚುನಾವಣೆಯಲ್ಲಿ ಹು-ಧಾ ಪಶ್ಚಿಮ-74 ರ ಮತ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದು, ಪಕ್ಷದ ಮುಖಂಡರು ಕೊಡುವ ವಿಶ್ವಾಸ ಇದೆ ಎಂದು ಅಲ್ತಾಫನವಾಜ್ ಕಿತ್ತೂರ ತಿಳಿಸಿದರು.
ಇದನ್ನೂ ಓದಿ : ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವುದನ್ನ ನಿಲ್ಲಿಸಬೇಕು : ಕೆ ಸಿ ಪುಟ್ಟಸಿದ್ಧಶೆಟ್ಟಿ