ಹುಬ್ಬಳ್ಳಿ: ಕಾಟಾಚಾರಕ್ಕೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ರಾಜ್ಯದ ಎಲ್ಲೆಡೆ ಪ್ರವಾಹವಾಗಿದೆ. ಆದರೆ ಉತ್ತರ ಕನ್ನಡಕ್ಕೆ ಮಾತ್ರವೇ ತೆರಳಿ ಅಲ್ಲಿಂದ ದೆಹಲಿಗೆ ಹೋಗಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಪ್ರವಾಹ ಸಂದರ್ಭದಲ್ಲಿ ಬಿಜೆಪಿಯವರು ಅಧಿಕಾರಕ್ಕಾಗಿ ಓಡಾಡುತ್ತಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಾಟಾಚಾರಕ್ಕೆ ಉತ್ತರ ಕನ್ನಡ ಪ್ರವಾಸ ಮಾಡಿದ್ದಾರೆ. ಇಲ್ಲಿ ಯಾರೂ ಮಂತ್ರಿಗಳಿಲ್ಲ. ದೆಹಲಿಗೆ ಹೋಗಿ ನೆರೆ ಪರಿಹಾರ ಕೇಳಬೇಕು. ಕೂಡಲೇ ಮಂತ್ರಿಮಂಡಲ ಮಾಡೋ ಬಗ್ಗೆ ಕೇಳಬೇಕು. ಅಷ್ಟಕ್ಕೂ ಇವರಿಗೆ ಜನರ ಹಿತ ಮುಖ್ಯ ಅಲ್ಲ ಅನಿಸುತ್ತಿದೆ. ರಾಜ್ಯದಲ್ಲಿ ಜಿಲ್ಲಾ ಮಂತ್ರಿಗಳಿಲ್ಲ, ಇಂತಹ ಕೆಟ್ಟ ಪರಸ್ಥಿತಿ ರಾಜ್ಯದಲ್ಲಿ ಎಂದೂ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನೊಂದೆಡೆ, ಈ ಕುರಿತು ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಕೇವಲವಾಗಿ ನೋಡುತ್ತಿದೆ. ಕರ್ನಾಟಕ ರಾಜ್ಯವನ್ನು ಅವರು ಮರೆತು ಬಿಟ್ಟಿದ್ದಾರೆ. ಗುಜರಾತ್ ಮತ್ತು ಬಿಹಾರ ರಾಜ್ಯದಲ್ಲಿ ನೆರೆ ಬಂದ್ರೆ ಪ್ರಧಾನಿ ತಕ್ಷಣ ಭೇಟಿ ನೀಡಿ ಪರಿಹಾರ ಘೋಷಣೆ ಮಾಡ್ತಾರೆ. ಕರ್ನಾಟಕ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನೆರೆ ಬಂದಿದೆ ಆದ್ರೆ ಕೇಂದ್ರದಿಂದ ಕರ್ನಾಟಕಕ್ಕೆ ಬಿಡಿಗಾಸನ್ನ ಇನ್ನೂ ಕೊಟ್ಟಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Video: ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಬಂದ ಡಿಸಿಎಂ: ಸಚಿವರ ವಿರುದ್ಧ ಮಹಿಳೆಯರ ರೋಷಾವೇಶ