ಧಾರವಾಡ: ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್ ನಡವಳಿಕೆ ಆಶ್ಚರ್ಯವಾಗಿದೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿಯೂ ಈ ಕಾಯ್ದೆ ಬಗ್ಗೆ ಚರ್ಚೆ ಆಗಿದೆ. ವಾಜಪೇಯಿ ಕಾಲದಲ್ಲಿಯೂ ತಿದ್ದುಪಡಿ ಬಗ್ಗೆ ಚರ್ಚೆ ಆಗಿತ್ತು, ಆದರೆ ಪಾಸ್ ಆಗಿರಲಿಲ್ಲ. ಮನಮೋಹನಸಿಂಗ್ ಕಾಲದಲ್ಲಿಯೂ ಚರ್ಚೆ ಆದಾಗಲೂ ವಿರೋಧ ಮಾಡಿಲ್ಲ. ಇವತ್ತು ನರೇಂದ್ರ ಮೋದಿ, ಶಾ ಕಾಲದಲ್ಲಿ ಕಾಯ್ದೆ ಪಾಸ್ ಆಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಪಾಸ್ ಆಗಿದ್ದಾಗ ವಿರೋಧ ಆಗಿಲ್ಲ. ಪೌರತ್ವ ಬೇಡ, ದೇಶ ಬೇಕು ಅಂದರೆ ಹೇಗೆ? ಪೌರತ್ವವೂ ಬೇಕು, ದೇಶವೂ ಬೇಕು. ಇಂದಿರಾ ಗಾಂಧಿ ಕಾಲದ ಬಾಂಗ್ಲಾ ನಿರಾಶ್ರಿತರು ದೇಶದಲ್ಲಿ ಇದ್ದಾರೆ. ಪಾಕ್‌ನಿಂದ ಬಂದ ನಿರಾಶ್ರಿತರು ಇದ್ದಾರೆ. ಅವರೆಲ್ಲ ನೊಂದು ಬಂದವರು. ಪಾಕ್, ಬಾಂಗ್ಲಾ ದೇಶಗಳಲ್ಲಿ ದೌರ್ಜನ್ಯ ಆದಾಗ ದೇಶ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಅವರಿಗೆ ಪೌರತ್ವ ಕೊಡುವ ಬಗ್ಗೆ ಮೊದಲಿನಿಂದಲೂ ಚರ್ಚೆ ಆಗಿವೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್‌ನವರು ಯಾಕೆ ವಿರೋಧ ಮಾಡುತ್ತೇವೆ ಅಂತಾ ಹೇಳುತ್ತಿಲ್ಲ. ವೋಟ್ ಬ್ಯಾಂಕ್ ಕಳೆದುಹೋಗುವ ಆತಂಕಕ್ಕೆ ಕಾಂಗ್ರೆಸ್ ಕಾಯ್ದೆಗೆ ವಿರೋಧ ಮಾಡುತ್ತಿದೆ ಎಂದು ದೂರಿದರು. ಡಾ. ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಸಿಎಎಗೆ ವಿರೋಧ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಸಂವಿಧಾನ ಬರೆದವರ ಮೊಮ್ಮಗ ಇರಬಹುದು. ಆದ್ರೆ ಅವರು ಸಂವಿಧಾನ ತಜ್ಞ ಅಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಅಮಿತ್ ಶಾ ಜೊತೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟದ ಬಗ್ಗೆ ಚರ್ಚೆ ಆಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಮ್ಮ ನಾಯಕ ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟರೆ ಚರ್ಚೆ ಆಗುತ್ತದೆ ಎಂದರು.