ಹುಬ್ಬಳ್ಳಿ: ಬಣಜಿಗ ಸಮಾಜದ ಬಗ್ಗೆ ಮತ್ತು ನಮ್ಮ ರಾಜ್ಯ ಘಟಕದ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವಹೇಳನಕಾರಿ ಹೇಳಿಕೆ ನೀಡಿದ್ದು ಖಂಡನೀಯ. ಕೂಡಲೇ ಅವರು ಸಮಾಜದ ಕ್ಷಮೆ ಕೇಳಬೇಕು ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಒತ್ತಾಯಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ನಡೆಸಿ ಮಾತನಾಡಿದ ಅವರು, ಬಣಜಿಗರು ಶಾಂತಿ ಪ್ರಿಯರು. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ಜೀವನ ನಡೆಸಿಕೊಂಡು ಹೋಗುತ್ತಿದ್ದೇವೆ. ಆದರೆ ಇವರಿಬ್ಬರು ನಾಯಕರು ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಸಮುದಾಯ ಸಮಾವೇಶದಲ್ಲಿ ಬಣಜಿಗ ಸಮಾಜಕ್ಕೆ ಅವಹೇಳನವಾಗುವಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಶಪ್ಪನರ್ ಮತ್ತು ಯತ್ನಾಳ್ ವಿರುದ್ಧ ಸ್ವಯಂಪ್ರೇರಿತವಾಗಿ ಜಾತಿ ನಿಂದನೆ ಕೇಸ್ ದಾಖಲಿಸಲು ಸೂಚನೆ ನೀಡಬೇಕು. ಅವರಿಗೆ ಪಕ್ಷದಿಂದ ಟಿಕೆಟ್ ನೀಡಬಾರದು. ಒಂದು ವೇಳೆ ಟಿಕೆಟ್ ನೀಡಿದರೆ ಅವರಿಗೆ ಬುದ್ಧಿ ಕಲಿಸುತ್ತೇವೆ. ಇವರ ವಿರುದ್ಧ ಹೋರಾಟ ತೀವ್ರಗೊಳ್ಳುವ ಮುನ್ನ ಇಬ್ಬರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಲಿಂಗಾಯತ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ: ವಿಜಯಾನಂದ ಕಾಶಪ್ಪನವರ್