ಬೆಂಗಳೂರು: ಉತ್ತರ ಕರ್ನಾಟಕ ಭಾಗದ 7 ವಿಧಾನಸಭೆ ಕ್ಷೇತ್ರಗಳಿಗೆ ಬೈಎಲೆಕ್ಷನ್ ನಡೆಯಲಿರುವ ಹಿನ್ನೆಲೆಯಲ್ಲಿ ಸಿದ್ಧತಾಕಾರ್ಯಗಳ ಕುರಿತು ನಾಳೆ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ನಾಳೆ ಬೆಳಗ್ಗೆ 8.05ಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹುಬ್ಬಳ್ಳಿಗೆ ತೆರಳಲಿರುವ ಸಿಎಂ, 10.30 ರಿಂದ ಸಂಜೆ 5 ಗಂಟೆವರೆಗೆ ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಪಕ್ಷದ ಸರಣಿ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ದಕ್ಷಿಣ ಕರ್ನಾಟಕದ 8 ಕ್ಷೇತ್ರಗಳ ಸಭೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆಯಲಿದ್ದು, ಇನ್ನುಳಿದ ಉತ್ತರ ಕರ್ನಾಟಕ ಭಾಗದ ಏಳು ಕ್ಷೇತ್ರಗಳ ಪೈಕಿ ಪ್ರತಿ ಕ್ಷೇತ್ರವಾರು ಪ್ರತ್ಯೇಕ ಸಭೆ ನಡೆಸಿ ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಅನರ್ಹರಿಗೆ ಟಿಕೆಟ್, ಕಳೆದ ಬಾರಿಯ ಪರಾಜಿತರ ಮನವೊಲಿಕೆ, ಪಕ್ಷ ಸಂಘಟನೆ, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.
ಬಂಡಾಯದ ಪರಿಸ್ಥಿತಿ ಎದುರಾಗದ ರೀತಿ ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರವಾರು ಸಭೆ ನಡೆಸುತ್ತಿದ್ದು, ಸಭೆ ನಂತರ ಅಗತ್ಯ ಬಿದ್ದರೆ ಪಕ್ಷದ ಕೋರ್ ಕಮಿಟಿ ಸಭೆಯನ್ನೂ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.
ಸರಣಿ ಸಭೆ ಬಳಿಕ ಸಂಜೆ 6 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಹೊರಡಲಿರುವ ಸಿಎಂ, 7 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಬಳಿಕ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಗೆ ಹಿಂದಿರುಗಲಿದ್ದಾರೆ.