ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವು ಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಅಂಜುಮನ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮುಸ್ಲಿಂ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿದರು. ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಈಗಾಗಲೇ ಗೋರಿಗಳನ್ನು ತಂತ್ರಜ್ಞಾನದ ಸಹಾಯದಿಂದ ಸ್ಥಳಾಂತರಿಸಲಾಗಿದೆ.
ಧಾರ್ಮಿಕ ಸ್ಥಳಗಳ ತೆರವು ನೋವಿನ ಸಂಗತಿ: ನಾಗರಿಕತೆ ಬೆಳೆಯುತ್ತಿದೆ. ಅವಶ್ಯಕತೆಯೂ ಹೆಚ್ಚಿದೆ. ಅಲ್ಲದೇ ರಸ್ತೆಗಳ ವಿಸ್ತೀರ್ಣವೂ ಹೆಚ್ಚಾಗುತ್ತಿರುವ ಕಾರಣ ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದೇ ರಸ್ತೆಯಲ್ಲಿಯೇ 13 ಧಾರ್ಮಿಕ ಸ್ಥಳಗಳನ್ನು ತೆರವು ಮಾಡಲಾಗಿದೆ. ದೇಗುಲ ಹಾಗೂ ಮಸೀದಿ ಮತ್ತು ಇತರೆ ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ನಿಜಕ್ಕೂ ನೋವಿನ ಸಂಗತಿ ಎಂದು ಸಿಎಂ ಹೇಳಿದರು.
ಇಲ್ಲಿನ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಶಾಂತಿ ಹಾಗೂ ಸೌಹಾರ್ದತೆಯಿಂದ ಇಂತಹ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಅವರಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈಗಾಗಲೇ ದರ್ಗಾ ತೆರವು ಮಾಡಿದ್ದಾರೆ. ಗೋರಿಗಳನ್ನು ಕೂಡ ಶಿಫ್ಟ್ ಮಾಡಿದ್ದಾರೆ. ಹೊಸದಾದ ಮಸೀದಿ ನಿರ್ಮಾಣದ ಬಗ್ಗೆ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಅವರೆಲ್ಲರೂ ಕೂಡಿಕೊಂಡು ನಿರ್ಮಾಣದ ಬಗ್ಗೆ ಮಾಹಿತಿ ನೀಡಲಿ, ಸಹಕಾರ ನೀಡುತ್ತೇನೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ದರ್ಗಾ ತೆರವು ಕಾರ್ಯಾಚರಣೆ... ಸಂಚಾರ ಮಾರ್ಗ ಬದಲಾವಣೆ