ಹುಬ್ಬಳ್ಳಿ: 'ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆ ಕುರಿತಾದ ಆಡಿಯೋವನ್ನು ತಿರುಚಲಾಗಿದೆಯೋ ಏನು ನೋಡಬೇಕು. ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ, 'ಆಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ. ಬಿ.ಎಲ್ ಸಂತೋಷ್ ಅವರು ಬಿಜೆಪಿಗೆ ಲಿಂಗಾಯತ ಮತಗಳು ಬೇಡ ಎಂದಿರುವ ಸುದ್ದಿಯೂ ಕೂಡ ಫೇಕ್. ಈಗಾಗಲೇ ಈ ಬಗ್ಗೆ ದೂರು ದಾಖಲು ಮಾಡಲಾಗಿದೆ' ಎಂದರು.
ಡಿಕೆ ಶಿವಕುಮಾರ್ ಏನು ಬೇಕಾದರೂ ಪಠಣ ಮಾಡಲಿ ಎಂದ ಸಿಎಂ ಬೊಮ್ಮಾಯಿ, ನಟ ಶಿವರಾಜ್ಕುಮಾರ್ ಮೇಲೆ ಬಿಜೆಪಿ ಟ್ರೋಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ನಟರೂ ಕೂಡ ಯಾವ ಪಕ್ಷದ ಪರವಾಗಿ ಬೇಕಾದರೂ ಪ್ರಚಾರ ಮಾಡಬಹುದು. ಸಂಸದ ಪ್ರತಾಪ್ ಸಿಂಹ ಮತ್ತು ಶಿವರಾಜ್ಕುಮಾರ್ ಟೀಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ಕುಮಾರ್ ಪ್ರಚಾರದ ಬಗ್ಗೆ ನನಗೇನೂ ಅಭ್ಯಂತರ ಇಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಚಾರಕ್ಕೆ ಬರುತ್ತಿದ್ದಾರೆ. ಅದು ಅವರ ಪಕ್ಷದ ಪ್ರಚಾರ. ಇಂದು ಮೋದಿ ಕೂಡ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಮೊದಲಿಗಿಂತಲೂ ಈಗ ಮೋದಿ ಅಲೆ ಜಾಸ್ತಿಯಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಸುರ್ಜೇವಾಲ ಆರೋಪವೇನು?: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಈ ವೇಳೆ ಮಾತನಾಡಿದ್ದ ಸುರ್ಜೇವಾಲ, ಬಿಜೆಪಿಯು ತನ್ನ ದ್ವೇಷದ ಮೂಲಕ ಕರ್ನಾಟಕದ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ. ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿರುವುದರಿಂದ ಕಂಗೆಟ್ಟ ಬಿಜೆಪಿ, ಮಲ್ಲಿಕಾರ್ಜುನ್ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ಕನ್ನಡ ನಾಡಿನ ಮಗ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ದ್ವೇಷ ಕಾರುತ್ತ ಬಂದಿದೆ. ಖರ್ಗೆ ಅವರು ದಲಿತ ಹಾಗೂ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಅವರ ವಿರುದ್ಧ ಸಂಚು ರೂಪಿಸುತ್ತಿದೆ ಎಂದು ಸುರ್ಜೇವಾಲ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ರೋಡ್ ಶೋನಲ್ಲಿ ರಾರಾಜಿಸುತ್ತಿರುವ ಬಜರಂಗಿ ಧ್ವಜಗಳು: ಕೇಸರಿ ಕಾರ್ಯಕರ್ತರಿಂದ ಕಾಂಗ್ರೆಸ್ಗೆ ಟಕ್ಕರ್