ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ಯಾವುದೇ ಕಾನೂನು ಗೊಂದಲವಿಲ್ಲ. ಪಂಚಮಸಾಲಿ ಮತ್ತು ಒಕ್ಕಲಿಗ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಉಂಟು ಮಾಡುವುದು ಬೇಡ. ಮೀಸಲಾತಿ ವಿಚಾರದಲ್ಲಿ ಸಂವಿಧಾನಾತ್ಮಕವಾಗಿ ಯಾವುದೇ ತೊಡಕಾಗದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೀಸಲಾತಿ ವಿಚಾರವಾಗಿ ಚರ್ಚೆ: ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಮಧ್ಯಂತರ ವರದಿ ಇದೆ. ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇನ್ನೂ ಇದರಲ್ಲಿ ನಮ್ಮ ಸರ್ಕಾರ ಉದ್ದೇಶ ಹೇಳಿದ್ದೇವೆ. ಇದು ನಮ್ಮ ಅಚಲ ನಿರ್ಧಾರವೂ ಸಹ ಆಗಿದೆ. ಅಂತಿಮ ವರದಿಯಲ್ಲಿ ಅಂಕಿ-ಅಂಶಗಳ ಮಾಹಿತಿ ನೀಡುತ್ತೇವೆ. ಮೀಸಲಾತಿ ಜಾರಿ ವಿಚಾರದಲ್ಲಿ ಸಂಬಂಧ ಪಟ್ಟವರ ಜೊತೆ ಚರ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ, ಯಾರು ಆತಂಕ ಪಡುವ ವಿಚಾರ ಇಲ್ಲ ಎಂದರು.
ಇದನ್ನೂ ಓದಿ: ಲಿಂಗಾಯತ, ಒಕ್ಕಲಿಗರಿಗೆ 2D - 2C ಪ್ರವರ್ಗ ಮೀಸಲಾತಿ: ಸರ್ಕಾರದ ರಿಸರ್ವೇಶನ್ ಮರು ಹಂಚಿಕೆ ಲೆಕ್ಕಾಚಾರವೇನು?
ನ್ಯಾಯಕೊಡುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ: ಕೆಲ ವರ್ಗದ ಜನರಿಗೆ ಶೈಕ್ಷಣಿಕ- ಉದ್ಯೋಗದಲ್ಲಿ ಹಿನ್ನಡೆಯಾಗಿದ್ದು ನಿಜ. ಆದ್ದರಿಂದ ಅವರಿಗೆ ನ್ಯಾಯಕೊಡುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸ್ಪಷ್ಟೀಕರಣ ಬೇಕಾದರೆ ಕೊಡುತ್ತೇವೆ. ಇದರಲ್ಲಿ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯಿಲ್ಲ. ವಿರೋಧ ಪಕ್ಷದವರು ತಾವು ಅಧಿಕಾರದಲ್ಲಿ ಇದ್ದಾಗ ಈ ಬೇಡಿಕೆ ಈಡೇರಿಸಲು ಆಗಲಿಲ್ಲ ಎಂದು ಹೇಳಿದರು.
ಆದೇಶದಲ್ಲಿ ಕೆಳಗಡೆ ಸಹಿ ಇದೆ: ಮಹದಾಯಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಮಹದಾಯಿ ಯೋಜನೆ ವಿಚಾರದಲ್ಲಿ ಡಿಪಿಆರ್ಗೆ ಗ್ರಿನ್ ಸಿಗ್ನಲ್ ನೀಡಿದ ಆದೇಶದಲ್ಲಿ ಕೆಳಗಡೆ ಸಹಿ ಇದೆ. ಇದರ ಬಗ್ಗೆ ಅನುಮಾನ ಬೇಡ. ಕಾಂಗ್ರೆಸ್ ಯಾವ ಉದ್ದೇಶಕ್ಕೆ ಆರೋಪಿಸುತ್ತಿದೆ ಗೊತ್ತಿಲ್ಲ. ಮಹದಾಯಿಗಾಗಿ ನಾವು ಹೋರಾಟ ಮಾಡಿದ್ವಿ, ಅವರು ಹೋರಾಟ ಮಾಡಿದ್ರು. ಆದರೆ ಈಗ ಆ ಹೋರಾಟಕ್ಕೆ ತಾರ್ಕಿಕ ಜಯ ಸಿಕ್ಕಿದೆ. 20 ರಿಂದ 25 ವರ್ಷ ಹೋರಾಟಕ್ಕೆ ಫಲ ಸಿಕ್ಕಿದೆ. ಇಂತಹ ಸಂದರ್ಭಗಳಲ್ಲಿ ಲೋಪದೋಷ ಹುಡುಕುವುದು ಅವರ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಮಹದಾಯಿ ಯೋಜನೆ ಡಿಪಿಆರ್ಗೆ ಕೇಂದ್ರದ ಅನುಮತಿ: ಮೋದಿ, ಶಾಗೆ ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ
ಪ್ರತಿಪಕ್ಷಗಳ ಟೀಕೆ ಟಿಪ್ಪಣಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸರ್ಕಾರದ ಅಚಲ ನಿರ್ಧಾರ ಕೈಗೊಂಡಿದೆ. ಡಿಪಿಆರ್ ಆಗಿದೆ. ಎಂಓಎಫ್ ಕ್ಲಿಯರೆನ್ಸ್ ತೆಗೆದುಕೊಂಡು ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತವೆ ಇದು ಸ್ಪಷ್ಟವಾದ ಮಾಹಿತಿ ಎಂದು ಅವರು ಹೇಳಿದರು.
ಬೆಳಗಾವಿಯ ಅಧಿವೇಶನ ನಡೆದ ಸಮಯದಲ್ಲಿ ಕೇಂದ್ರ ಸರ್ಕಾರ ಮಹದಾಯಿ ಯೋಜನೆ ವಿಸ್ತೃತ ವರದಿಗೆ ಅನುಮೋದನೆ ನೀಡಿತ್ತು. ಈ ವಿಷಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಸದನದ ಸದಸ್ಯರಿಗೆ ತಿಳಿಸಿದ್ದರು. ಇದಾದ ಬಳಿಕ ಪ್ರತಿಪಕ್ಷಗಳು ಮಹದಾಯಿ ವಿಚಾರದಲ್ಲಿ ಬಿಜೆಪಿ ಮೋಸ ಮಾಡುತ್ತಿದೆ ಎಂದು ಆರೋಪಿಸುತ್ತಿವೆ. ಕೇಂದ್ರ ನೀಡಿದೆ ಎನ್ನಲಾದ ಡಿಪಿಆರ್ ಅನುಮತಿ ಪತ್ರದಲ್ಲಿ ದಿನಾಂಕವೇ ನಮೂದಾಗಿಲ್ಲ. ದಿನಾಂಕವೇ ಹಾಕದ ಆದೇಶಕ್ಕೆ ಯಾವ ಮೌಲ್ಯವಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಬಿಜೆಪಿಯಿಂದ ಮೂಗಿಗೆ ತುಪ್ಪ ಸವರುವ ಕೆಲಸ: ಹೆಚ್.ಕೆ.ಪಾಟೀಲ್
ಪಂಚಮಸಾಲಿ ಮತ್ತು ಒಕ್ಕಲಿಗರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದರು. ಕೊನೆಗೂ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ, ಎರಡು ಪ್ರಬಲ ಸಮುದಾಯಗಳಿಗೆ 2C ಹಾಗೂ 2D ಪ್ರವರ್ಗ ಸೃಷ್ಟಿ ಮಾಡಿ ಮೀಸಲಾತಿ ಘೋಷಣೆ ಮಾಡಿತ್ತು. ಈ ನಿರ್ಧಾರವನ್ನು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಕೈಗೊಂಡಿತ್ತು. 3A ನಲ್ಲಿರುವ ಒಕ್ಕಲಿಗರಿಗೆ 2C ಪ್ರವರ್ಗ ಸೃಷ್ಟಿಸಲಾಗಿದ್ದರೆ, 3B ಯಲ್ಲಿದ್ದ ಲಿಂಗಾಯತರಿಗೆ 2D ಕ್ಯಾಟಗರಿ ಸೃಷ್ಟಿಸಲಾಗಿದೆ.