ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಭಾಗದ ಪ್ರಮುಖ ನಾಯಕರು. ಅವರ ನಾಯಕತ್ವದಲ್ಲಿ ಪಕ್ಷದಿಂದ ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ಮಾಡಿದ್ದೇವೆ. ಅವರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದು ನಿಜ. ಡ್ಯಾಮೇಜ್ ಕಂಟ್ರೋಲ್ ಬಗ್ಗೆ ಪಕ್ಷ ಕಾರ್ಯತಂತ್ರ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಾನೂ ಅವರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಮೋದಿ ನೇತೃತ್ವದಲ್ಲಿ ಬದಲಾವಣೆ ತರುವ ಪ್ರಯತ್ನ. ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ನಮಗೆ ಆದರ್ಶರು. ಮುಖ್ಯಮಂತ್ರಿ ಇರೋವಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಅದೇ ರೀತಿ ಈಶ್ವರಪ್ಪ ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದರು. ಶೆಟ್ಟರ್ ಅವರಿಗೆ ಇದಕ್ಕಿಂತ ದೊಡ್ಡ ಹುದ್ದೆ ಕೊಡ್ತೀವಿ ಎಂದು ಹೇಳಲಾಗಿತ್ತು. ದಿಲ್ಲಿ ಮಟ್ಟದಲ್ಲಿ ಹುದ್ದೆ ನೀಡುವುದಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ನಾನು ನಿನ್ನೆ ಚರ್ಚೆ ಮಾಡಿ ಹೇಳಿದ್ದೆ. ಅವರು ಹೇಳುವ ವ್ಯಕ್ತಿಗೆ ಟಿಕೆಟ್ ಕೊಡ್ತೀವಿ ಎಂದು ಭರವಸೆ ನೀಡಲಾಗಿತ್ತು. ಆದರೂ ಶೆಟ್ಟರ್ ರಾಜೀನಾಮೆ ನೀಡಿರುವುದು ನೋವು, ಕಸಿವಿಸಿ ತಂದಿದೆ ಎಂದರು.
ಅವರು ನಮಗೆಲ್ಲ ಪಕ್ಷದ ಆದರ್ಶ ಹೇಳಿದವರು. ಲಿಂಗಾಯತ ಸಮುದಾಯಕ್ಕೆ ಅತೀ ಹೆಚ್ಚು ಸೀಟ್ ಕೊಟ್ಟಿದ್ದು ಬಿಜೆಪಿ. ಇಂದು ಭಾರತೀಯ ಜನತಾ ಪಕ್ಷ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗೋ ಪ್ರಯತ್ನ ಮಾಡುತ್ತಿದೆ ಎಂದರು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಬಿಜೆಪಿ ಇಂದ ಮಾತ್ರ ಸಾಧ್ಯ. ಎಲ್ಲರಿಗೂ ಅವಕಾಶ ಕೊಡಲಾಗಿದೆ. ಅತೀ ಹೆಚ್ಚು ಮಂತ್ರಿ ಸ್ಥಾನ ಕೊಟ್ಟಿದ್ದು ಬಿಜೆಪಿ. ಯಡಿಯೂರಪ್ಪ ನೇತೃತ್ವದಲ್ಲಿ ಮೊದಲನೇ ಪೀಳಿಗೆ ಬೆಳೆದು ನಿಂತಿದೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲ್ಲ ಎಂದ ಶೆಟ್ಟರ್: ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ
2ನೇ ಪೀಳೀಗೆಯಲ್ಲಿ ಲಿಂಗಾಯತ ಸಮುದಾಯದ ಸಿ. ಸಿ ಪಾಟೀಲ್, ನಿರಾಣಿ, ಸೋಮಣ್ಣ ಬೆಳೆದು ನಿಂತಿದ್ದಾರೆ. ನಮ್ಮ ಪಕ್ಷ ಚುನಾವಣೆ ತಂತ್ರ ರೂಪಿಸುತ್ತದೆ. ಪಕ್ಷ ಗೆಲ್ಲುತ್ತದೆ. ಬದಲಾವಣೆ ತರುವ ಕಾಲ ಇದು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು. ಅದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿದೆ ಎಂದು ಸಿಎಂ ಹೇಳಿದರು.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹೆಸರು ಯಾರದ್ದು ಇರುತ್ತೆ?, ಜೆಡಿಎಸ್ನಲ್ಲಿ ಕುಮಾರಸ್ವಾಮಿ ಹೆಸರು ಇರುತ್ತೆ. ಜಗದೀಶ್ ಶೆಟ್ಟರ್ ಮುಂದುವರೆಸಿಕೊಂಡು ಹೋದರೆ ಚೆನ್ನಾಗಿ ಇರ್ತಿತ್ತು. ಹೊಸ ಬೆಳವಣಿಗಾಗಿ ಈ ಪ್ರಯತ್ನ. ನಿನ್ನೆ ಸ್ವತಃ ಅಮಿತ್ ಶಾ ಶೆಟ್ಟರ್ ಜತೆ ಮಾತಾಡಿದ್ದಾರೆ. ರಾಜ್ಯ, ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಅವರ ಹೆಸರು ಇತ್ತು. ಇದು ಮೇಲಿನ ತೀರ್ಮಾನ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ ವಿಧಾಸಭೆ ಚುನಾವಣೆ ಬಿಜೆಪಿ ಸವಾಲಾಗಿ ಪರಿಣಮಿಸಿದೆ. ಟಿಕೆಟ್ ತಪ್ಪಿದ್ದರಿಂದ ಕೆರಳಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನವೊಲಿಸುವಲ್ಲಿ ಬಿಜೆಪಿ ಹೈಕಮಾಂಡ್ ವಿಫಲವಾಗಿದೆ. ಹುಬ್ಬಳ್ಳಿಯ ಶೆಟ್ಟರ್ ನಿವಾಸದಲ್ಲಿ ನಡೆದ ಸಂಧಾನ ಸಭೆಯೂ ವಿಫಲಗೊಂಡಿದೆ. ಹೀಗಾಗಿ ಶೆಟ್ಟರ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ಗುಡ್ ಬೈ.. ಚುನಾವಣೆಗೆ ನಿಂತೇ ನಿಲ್ತೇನಿ - ಹೈಕಮಾಂಡ್ಗೆ ಶೆಟ್ಟರ್ ಸವಾಲು