ಹುಬ್ಬಳ್ಳಿ: ಇಷ್ಟು ಸಂಖ್ಯೆಯಲ್ಲಿ ಶಿಕ್ಷಕರನ್ನು ಒಂದೇ ಕಡೆ ನೋಡುವುದೆಂದರೆ ದೇವರನ್ನು ನೋಡಿದಂತೆ. ಶಿಕ್ಷಕರು ದೇವರಿದ್ದಂತೆ, ಇಂತಹ ವೃತ್ತಿಯಲ್ಲಿರುವುದು ಪುಣ್ಯಭಾಗ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಬಿವಿಬಿ ಕಾಲೇಜಿನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಪರ ಅವರು ಮತಯಾಚಿಸಿದರು.
ಹೊರಟ್ಟಿ ನಾಲ್ಕು ದಶಕದಿಂದ ಸೇವೆ ಮಾಡುತ್ತಿದ್ದು, ವಿರೋಧ ಪಕ್ಷದಲ್ಲಿದ್ದಾಗ ಅವರನ್ನು ಸೋಲಿಸಲು ಪ್ರಯತ್ನ ಮಾಡುತ್ತಿದ್ದೆವು. ಆದರೆ ಅವರು ಸೋಲುವ ಪಕ್ಷದಲ್ಲಿದ್ದರೂ ಗೆದ್ದು ಬಿಡುತ್ತಿದ್ದರು. ಏನೇ ಮಾಡಿದರೂ ಅವರು ಸೋಲುತ್ತಿರಲಿಲ್ಲ. ಇದೇ ಕಾರಣಕ್ಕೆ ನಮ್ಮ ಪಕ್ಷಕ್ಕೆ ಬಂದು ಬಿಡಿ ಎನ್ನುತ್ತಿದ್ದೆವು. ಈ ಬಾರಿ ಗೆಲ್ಲುವ ಕುದುರೆ, ಗೆಲ್ಲಿಸುವ ಪಕ್ಷ ಎರಡೂ ಒಂದಾಗಿವೆ ಎಂದರು.
ಹೊರಟ್ಟಿ 42 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹೊರಟ್ಟಿ ಅವರಲ್ಲಿ ಎರಡು ಗುಣಗಳಿವೆ. ಒಂದು ಛಲ, ಮತ್ತೊಂದು ಸಕಾರಾತ್ಮಕವಾಗಿ ಚಿಂತಿಸುವುದು. ನಿಜವಾದ ಶಿಕ್ಷಕರ ಪ್ರತಿನಿಧಿ ಎಂದರೆ ಹೊರಟ್ಟಿ, ಶಿಕ್ಷಕರು-ಹೊರಟ್ಟಿ ಅವರದ್ದು ತಾಯಿ-ಮಕ್ಕಳ ಸಂಬಂಧವಿದ್ದಂತೆ. ಶಿಕ್ಷಕರ ಅನೇಕ ಕೆಲಸವನ್ನು ಹೊರಟ್ಟಿ ಮಾಡಿದ್ದಾರೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಅವರು ಗೆಲ್ಲಬೇಕು ಎಂದು ಶಿಕ್ಷಕರಿಗೆ ಸಿಎಂ ಮನವಿ ಮಾಡಿದರು.
ಹೊರಟ್ಟಿ ಬೆಂಬಲಕ್ಕೆ ಜೋಶಿ, ಶೆಟ್ಟರ್ ಮನವಿ: ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ, ನಾವು ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಎನ್ಇಪಿಯನ್ನು ಮಕ್ಕಳಲ್ಲಿರುವ ಪ್ರತಿಭೆ ಅನಾವರಣ ಮಾಡುವ ದೃಷ್ಟಿಯಿಂದ ಜಾರಿಗೆ ತರಲಾಗಿದೆ. ರಾಜ್ಯಸಭೆಯಲ್ಲಿ ಬಹುಮತದ ಸಮೀಪ ಬಂದಿದ್ದೇವೆ. ನಾವು ಬಿಲ್ ಪಾಸ್ ಮಾಡಲು ಪರಿಷತ್ನಲ್ಲಿ ಬಹುಮತ ಅಗತ್ಯ. ಪರಿಷತ್ನಲ್ಲಿ ಹೊರಟ್ಟಿಯವರ ಅನುಭವ ನಮಗೆ ಬೇಕಾಗಿದ್ದು, ಆಯ್ಕೆ ಮಾಡಿ ಕಳಿಸಿ ಎಂದು ಮನವಿ ಮಾಡಿದರು.
ಎಲ್ಲ ಭಾಗದಲ್ಲೂ ಹೊರಟ್ಟಿ ಪರ ಅಲೆ ಇದೆ. ಈ ಹಿಂದೆ ನಾಲ್ಕೈದು ಬಾರಿ ಅವರನ್ನ ಸೋಲಿಸುವ ಪ್ರಯತ್ನ ಮಾಡಿದ್ದೆವು. ಆದರೆ ಅವರು ಸೋಲಲಿಲ್ಲ, ನಾವು ಗೆಲ್ಲಲಿಲ್ಲ. ಈ ಹಿಂದೆ ಹೊರಟ್ಟಿ ವಿರುದ್ಧ ಬಿಜೆಪಿ ಅಂತಾ ಇತ್ತು. ಆದರೀಗ ಹೊರಟ್ಟಿ ಜೊತೆಗೆ ಬಿಜೆಪಿ ಇದೆ. ಅವರ ಮೇಲೆ ಶಿಕ್ಷಕರಿಗೆ ಸಾಕಷ್ಟು ವಿಶ್ವಾಸವಿದೆ. ಹೀಗಾಗಿ ಹೊರಟ್ಟಿಗೆ ಮತ ನೀಡಿ ಗೆಲ್ಲಿಸಿ ಎಂದು ಶಿಕ್ಷಕ ಮತದಾರರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನವಿ ಮಾಡಿದರು.
ಇದನ್ನೂ ಓದಿ: ಬಿ ಟೀಂ ಯಾರಾದರೇನು, ಬಿಜೆಪಿ ಯಾವತ್ತೂ ಎ ಟೀಂ: ಸಿಎಂ ಬೊಮ್ಮಾಯಿ