ಧಾರವಾಡ : ಕಳೆದ ಬಾರಿಗಿಂತ ಈ ಬಾರಿ ಮುಂಗಾರು ಮಳೆ ಶೇ. 37% ಕಡಿಮೆ ಆಗಿದೆ. ಇವತ್ತು ಅಥವಾ ನಾಳೆ ನಂತರ ಮುಂಗಾರು ಆಗಮನವಾಗುವ ಸಾಧ್ಯತೆ ಇದ್ದು, ಕೃಷಿ ಚಟುವಟಿಕೆಗಳನ್ನು ಮಾಡಲು ಬೀಜ ಮತ್ತು ಗೊಬ್ಬರ ನಮ್ಮ ಬಳಿ ಸ್ಟಾಕ್ ಇದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೋಡ ಬಿತ್ತನೆ ಮತ್ತೆ ಶುರು ಮಾಡುವ ವಿಚಾರ ಇನ್ನೊಂದು ಎರಡು ಮೂರು ದಿನ ಕಾಯ್ದು ಆಮೇಲೆ ಮಾಡಬೇಕಾ ಅನ್ನೋದನ್ನು ತೀರ್ಮಾನಿಸುತ್ತೇವೆ. ಈ ಹಿಂದೆ ಮಳೆ ಬಂದು ಆನೇಕ ಸಮಸ್ಯೆಗಳಾಗಿದ್ದವು. ಇದೀಗ ಪರಿಹಾರ ವಿತರಣೆ ವಿಳಂಬ ಹಿನ್ನೆಲೆ ಅದು ನೂತನವಾಗಿ ರಚನೆಯಾಗಿರುವ ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಸಮಸ್ಯೆ ಆಗಿತ್ತು. ಹಣಕಾಸು ವಿಭಾಗದ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಪರಿಹಾರ ನೀಡಲಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಯುವ ವಿಚಾರ, ಎಪಿಎಂಸಿ ಕಾಯ್ದೆ ಸೇರಿ 3 ಕೃಷಿ ಕಾಯ್ದೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸಭೆ ಮಾಡಲಾಗುತ್ತದೆ. ಬಳಿಕ ಸಭೆಯಲ್ಲಿ ತೆಗೆದುಕೊಂಡು ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ಚೆಲುವರಾಯಸ್ವಾಮಿ ತಿಳಿಸಿದರು.
ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಅನ್ನೋ ಆರೋಪವಿದೆ. ರೈತರಿಗೆ ಅಂತಲ್ಲ, ಉದ್ಯೋಗ ಇಲ್ಲದವರಿಗೆ ಸಹ ಇದೇ ಸ್ಥಿತಿ ಆಗಿದೆ. ಕೃಷಿಯಲ್ಲಿ ಸಹ ನಿಮ್ಮ ಉದ್ಯೋಗಕ್ಕಿಂತ ಲಾಭದಾಯಕ ರೈತರೂ ಇದಾರೆ. ಆದರೆ ಎಲ್ಲ ರೈತರು ಲಾಭದಾಯಕವಾಗಿಲ್ಲ. ಆ ಉದ್ದೇಶ ಇಟ್ಟುಕೊಂಡು ಹೆಣ್ಣು ಕೊಡುತ್ತಿಲ್ಲ ಅಂತಲ್ಲ. ವಾತಾವರಣ ನೋಡಿಕೊಂಡು ಹೆಣ್ಣು ಕೊಡುತ್ತಾರೆ ಎಂದು ಸಚಿವ ಚೆಲುವರಾಯಸ್ವಾಮಿ ಉತ್ತರಿಸಿದರು.
ಕೃಷಿ ಸಹ ಉದ್ಯಮ ಅನ್ನೋ ರೀತಿಯಲ್ಲಿ ಮಾಡಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಯಬೇಕು. 57% ಉದ್ಯೋಗ ಸದ್ಯಕ್ಕೆ ಖಾಲಿ ಇದೆ. ತಕ್ಷಣಕ್ಕೆ ಏನು ಮಾಡಬೇಕು ಅಂತ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ನೇಮಕಾತಿ ಅಥವಾ ಹೊರಗುತ್ತಿಗೆ ಯಾವುದು ಮಾಡಬೇಕು ಅನ್ನೋದನ್ನು ನಿರ್ಧಾರ ಮಾಡುತ್ತಿದ್ದೇವೆ. ಹಣಕಾಸು ಖಾತೆ ಸಿಎಂ ಸಿದ್ದರಾಮಯ್ಯ ಬಳಿ ಇರೋದರಿಂದ ಅವರ ಬಳಿ ಮಾತಾಡಿ ಬಗೆಹರಿಸುತ್ತೇವೆ ಎಂದು ಚೆಲುವರಾಯ ಸ್ವಾಮಿ ಹೇಳಿದರು.
ಇನ್ನು ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕೇಳಿದಾಗ, ಕೇವಲ ಆ ಇಲಾಖೆ ಮಂತ್ರಿ ಮಾತ್ರ ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ. ಬೇರೆ ಯಾರೂ ಅದರ ಬಗ್ಗೆ ಮಾತನಾಡಿಲ್ಲ. ಸಿಎಂ ಹಾಗೂ ಡಿಸಿಎಂ ಕ್ಯಾಬಿನೆಟ್ ನೇತೃತ್ವದಲ್ಲಿ ಅದರ ಬಗ್ಗೆ ಚರ್ಚೆ ಮಾಡಿದಾಗ ಗೊತ್ತಾಗುತ್ತದೆ ಎಂದು ತಿಳಿಸಿದರು.