ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ತಾರತಮ್ಯ ನೀತಿ ಹಾಗೂ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಪ್ರಕರಣ ಬ್ರೂಸ್ಪೇಟೆಯಲ್ಲಿ ನಡೆದಿದೆ.
ಕಲ್ಲಪ್ಪ ಶಿವಲಿಂಗಪ್ಪ ಅಣ್ಣಿಗೇರಿ (34) ಆತ್ಮಹತ್ಯೆಗೆ ಶರಣಾಗಿರುವ ಪೌರ ಕಾರ್ಮಿಕ. ಮೃತ ಕಲ್ಲಪ್ಪ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ನೇರ ವೇತನಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಅದು ಜಾರಿಯಾಗಿರಲಿಲ್ಲ ಎನ್ನಲಾಗ್ತಿದೆ. ಕಳೆದ ವಾರ ನೇರ ವೇತನಕ್ಕೆ ಆಗ್ರಹಿಸಿ ಇನ್ನೋರ್ವ ಪೌರ ಕಾರ್ಮಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಸಹ ಮಾಡಿದ್ದ. ಆದರೆ ಟ್ವೀಟ್ಗೆ ಪೂರಕ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಕಾರ್ಮಿಕನ ಅಗಲಿಕೆಯಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಪಾಲಿಕೆಯ ನೀತಿಗೆ ಪೌರಕಾರ್ಮಿಕರು ಆಕ್ರೋಶ ಹೊರಹಾಕಿದ್ದಾರೆ. ಶವಗಾರದ ಮುಂದೆ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಪೌರ ಕಾರ್ಮಿಕ ಕಲ್ಲಪ್ಪ ಆತ್ಮಹತ್ಯೆಗೆ ಪಾಲಿಕೆ ನೇರ ಹೊಣೆ ಎಂದು ಆರೋಪಿಸಿರುವ ಪೌರ ಕಾರ್ಮಿಕ ಸಂಘಟನೆ ಅಧ್ಯಕ್ಷ ಬಸಪ್ಪ ಮಾದರ್ ಅವರು ಕಾರ್ಮಿಕನ ಕುಟುಂಬಕ್ಕೆ ನ್ಯಾಯ ಸಿಗೋವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.