ಧಾರವಾಡ: ಮುಖ್ಯ ಶಿಕ್ಷಕರು ಮಾಡಿದ ಎಡವಟ್ಟಿನಿಂದ ಶಾಲೆಯ ಕೆಲ ಮಕ್ಕಳ ಜಾತಿಗಳು ಅದಲು ಬದಲಾಗಿ ಪಾಲಕರು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಪರದಾಡುವಂತಾಗಿದೆ.
ತಾಲೂಕಿನ ನಿಗದಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಅನೇಕ ಮಕ್ಕಳ ಮೂಲ ಜಾತಿ ಅದಲು ಬದಲಾಗಿದೆ. ಒಂದೇ ಮನೆಯಿಂದ ಬಂದ ಸಹೋದರರ ಜಾತಿಯನ್ನು ಬೇರೆ ಬೇರೆಯಾಗಿ ಹಿಂದಿನ ಮುಖ್ಯ ಶಿಕ್ಷಕರು ನಮೂದು ಮಾಡಿದ ಎಡವಟ್ಟಿನಿಂದಾಗಿ ಇದೀಗ ಪಾಲಕರು ಅಲೆದಾಡುವಂತಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಾರ್ಮ್ ತುಂಬುವ ವೇಳೆ ಇದು ಬಹಿರಂಗಗೊಂಡಿದ್ದರಿಂದ ಮಕ್ಕಳು ನಮ್ಮ ಜಾತಿ ಯಾವುದು? ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇದರಿಂದ ರೋಸಿ ಹೋಗಿರುವ ಪಾಲಕರು ಶಿಕ್ಷಣ ಇಲಾಖೆ ಮೊರೆ ಹೋಗಿದ್ದು, ಸಮಸ್ಯೆ ಬಗೆಹರಿಸಲು ಗ್ರಾಮೀಣ ಬಿಇಒ ಉಮೇಶ ಬಮ್ಮಕ್ಕನವರು ತಮ್ಮ ಅಧೀನದ ಮೂವರು ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಓದಿ: 'ಕರ್ನಾಟಕದಲ್ಲಿ ನಡೀತಿರೋ ಭ್ರಷ್ಟಾಚಾರ ಪ್ರಧಾನಿ ಕಣ್ಣಿಗೆ ಕಾಣುತ್ತಿಲ್ಲವೇ'
ಒಟ್ಟಿನಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರೊಬ್ಬರು ಮಾಡಿದ ಎಡವಟ್ಟಿನಿಂದ ಮಕ್ಕಳಿಗೆ ಮುಂದಿನ ದಾರಿ ಕಾಣದಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸುವ ಕಾರ್ಯ ಮಾಡಬೇಕಿದೆ.