ಧಾರವಾಡ: ಪ್ರಜ್ಞಾವಂತರಾದವರು ಲೋಕಸಭೆ, ರಾಜ್ಯಸಭೆ ಚರ್ಚೆ ನೋಡಿದ್ರೆ ಸಿಎಎ ಬಗ್ಗೆ ಅರಿವಾಗುತ್ತಿತ್ತು. ಲೋಕಸಭೆ, ರಾಜ್ಯಸಭೆ ಟಿವಿ ವಿಶ್ಲೇಷಣೆ ಯಾರಿಗೆ ಅರ್ಥವಾಗಿಲ್ಲವೊ ಅವರಿಗೆ ತಿಳಿಸುವ ಪ್ರಯತ್ನ ಆಡಳಿತ ಪಕ್ಷ ಮಾಡಬೇಕಿತ್ತು. ಈಗ ಆಡಳಿತ ಪಕ್ಷ ಅದನ್ನು ಮಾಡುತ್ತಿದೆ. ದುರದೃಷ್ಟಕರ ಸಂಗತಿ ಅಂದ್ರೆ ಪ್ರತಿ ಪಕ್ಷಗಳು ಕೂಡ ರಾಷ್ಟ್ರೀಯ ಹಿತದ ನಿರ್ಣಯ ಬೆಂಬಲಿಸಬೇಕಿತ್ತು ಎಂದು ಧಾರವಾಡದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವೋಟ್ ಬ್ಯಾಂಕ್, ನಾನು ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಪ್ರಚೋದನೆ ಕೊಡುವುದು ಸರಿಯಲ್ಲ, ಅದು ಆಗಿ ಹೋಗಿದೆ. ಮುಸ್ಲಿಂರಿಗೆ ಈಗ ತಾವು ತಪ್ಪು ಮಾಡುತ್ತಿದ್ದೇವೆ ಅಂತಾ ಅರ್ಥ ಆಗಿದೆ. ಈಗ ಅವರ ಪ್ರತಿಭಟನೆಯ ಮೂಡ್ ಬದಲಾಗಿದೆ ಎಂದಿದ್ದಾರೆ.
ಈಗ ಶಾಂತಿಯುತವಾಗಿ ಪೋಲೀಸರಿಗೆ ಹೂವು ಕೊಡುವ ಕೆಲಸ ಮಾಡಿದ್ದಾರೆ. ಪ್ರತಿಭಟನೆ ಎಲ್ಲರ ಹಕ್ಕು ಆದರೆ ಪ್ರಜಾಪ್ರಭುತ್ವ ಧಿಕ್ಕರಿಸಿ ಪ್ರತಿಭಟನೆ ಮಾಡಬಾರದು. ಮಂಗಳೂರು ಗಲಭೆ ಮೊದಲು ನ್ಯಾಯಾಂಗ ತನಿಖೆ ಆಗಬೇಕಿತ್ತು. ಮೊದಲು ಗಲಭೆಯ ತನಿಖೆಯಾಗಲಿ ಕೇರಳದಿಂದ ಎಷ್ಟು ಜನ ಬಂದಿದ್ದರು ಎನ್ನುವುದೆಲ್ಲ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಗಲಭೆ ಹಿಂದೆ ಯಾರ ಯಾರ ಕೈವಾಡ ಇದೆ ಅನ್ನೋದು ಸ್ಪಷ್ಟವಾಗಬೇಕು. ನಂತರ ಗೋಲಿಬಾರ್ ಘಟನೆಯೂ ತನಿಖೆಯಾಗಲಿ ಇವತ್ತು ಮುಸ್ಲಿಮರು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿರುವುದು ಸಂತಸ ತಂದಿದೆ. ಯಾವುದೇ ಸರ್ಕಾರ ಯಾವುದೇ ನಿರ್ಣಯ ತಂದಾಗ ಪ್ರಶ್ನೆ ಮಾಡುವ ಹಕ್ಕು ಇದೆ. ಆದರೆ, ಅದು ಪ್ರಜಾಪ್ರಭುತ್ವದ ಮೂಲಕ ಆಗಬೇಕು. ದೇಶದ ಪರ ಇರೋರು ಮತ್ತು ದೇಶ ತುಂಡರಿಸಬೇಕು ಎನ್ನುವವರ ಮಧ್ಯೆ ಈಗ ಹೋರಾಟ ನಡಿತಾ ಇದೆ. ಇದು ಎಡಪಂಥ, ಬಲಪಂಥ ಮಧ್ಯದ ಹೋರಾಟ ಅಲ್ಲ ಎಂದು ಸ್ಪಷ್ಟಪಡಿಸಿದರು.