ಧಾರವಾಡ : ಕಳೆದ ಕೆಲ ತಿಂಗಳುಗಳ ಹಿಂದೆಯಿಂದ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.
ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಜೈಭಾರತ್ ಕಾಲೋನಿಯಲ್ಲಿ ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾಗಿತ್ತು. ಅಲ್ಲದೇ, ಹೂಲಿಕೇರಿಯ ಇಂದಿರಮ್ಮ ಕೆರೆ ಒಡೆದು ಮೆಕ್ಕೆಜೋಳ ಬೆಳೆ ನಾಶವಾಗಿತ್ತು. ಈ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪ್ರಮಾಣ ವೀಕ್ಷಿಸಿದರು.
ಅಲ್ಲಿಂದ ಹೂಲಿಕೇರಿ ಕಕ್ಕೇರಿ ರಸ್ತೆ ಅಳ್ನಾವರದ ಡೌಗಿ ನಾಲಾ, ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಣಚಿ ಸೇತುವೆ ಕಲಕೇರಿ ರಸ್ತೆ ಹಾಗೂ ಅರವಟಗಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.
ಕೇಂದ್ರ ಅಧ್ಯಯನ ತಂಡದಲ್ಲಿ ಹಿರಿಯ ಅಧಿಕಾರಿಗಳಾದ ಗುರುಪ್ರಸಾದ್ ಮತ್ತು ಮಹೇಶ್ಕುಮಾರ್ ಇದ್ದರು. ತಂಡಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ತಹಶೀಲ್ದಾರರು ಹಾನಿ ಸ್ಥಳಗಳ ಕುರಿತು ಮಾಹಿತಿ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳಿಗ ಕೇಂದ್ರ ಅಧ್ಯಯನ ತಂಡ ಭೇಟಿ..
ಕಳೆದ ತಿಂಗಳು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಚಿಕ್ಕೋಡಿ ಉಪವಿಭಾಗದಲ್ಲಿ ನದಿಗಳಲ್ಲಿ ಪ್ರವಾಹ ಉಂಟಾಗಿತ್ತು. ಪರಿಣಾಮ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿತ್ತು. ಈ ಹಿನ್ನೆಲೆ ಇವತ್ತು ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಭೇಟಿ ನೀಡಿದರು.
ಹುಕ್ಕೇರಿ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅಧ್ಯಯನ ತಂಡ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಸುಶೀಲ ಪಾಲ್ ನೇತೃತ್ವದ ತಂಡ ಹೀರಣ್ಯಕೇಶಿ ನದಿ ತೀರದ ನೆರೆ ಪೀಡಿತ ಪ್ರದೇಶಗಳಿಗೆ ಹಾಗೂ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಮ್ಮ ದೇವಸ್ಥಾನ, ಯರನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.
ಅಧಿಕಾರಿಗಳಿಂದ ನೆರೆ ಕುರಿತು ಸಂಪೂರ್ಣ ಮಾಹಿತಿ ಪಡೆದ ತಂಡ, 15 ದಿನದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದರು. ಕೇಂದ್ರ ತಂಡಕ್ಕೆ ಜಿಲ್ಲಾಡಳಿತದ ಜೊತೆಗೆ ವಿಪತ್ತು ನಿರ್ವಹಣಾ ಆಯುಕ್ತರ ಸಾಥ್ ನೀಡಿದ್ದಾರೆ. ನಾಳೆ ಕೇಂದ್ರ ಅಧ್ಯಯನ ತಂಡ ಚಿಕ್ಕೋಡಿ ಹಾಗೂ ಅಥಣಿ ಭಾಗದ ಕೃಷ್ಣಾ ನದಿ ಪ್ರವಾಹದಿಂದ ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಲಿದೆ.
ಕೇಂದ್ರ ಅಧ್ಯಯನ ತಂಡದ ಎದುರು ರೈತರ ಕಿಡಿ
ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಸಾಕಷ್ಟು ಅನಾಹುತ ಸಂಭವಿಸಿತ್ತು. ಹೀಗಾಗಿ, ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತ್ತು. ಆಗ ಇವರ ಎದುರು ಬಂದಿರುವ ರೈತರು ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದ ಸೇತುವೆ ವೀಕ್ಷಣೆ ವೇಳೆ ರೈತರು ಆಕ್ರೋಶ ಹೊರ ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ. ಮೂರು ವರ್ಷದಿಂದ ಹಾನಿ ಅನುಭವಿಸುತ್ತಿದ್ದೇವೆ. ಒಂದು ಸಲವೂ ಒಬ್ಬ ಅಧಿಕಾರಿಯೂ ಬಂದು ನಮ್ಮ ಸಂಕಷ್ಟ ನೋಡಿಲ್ಲ.
ಇಲ್ಲೇ ನಿಂತು ನೋಡೋದು ಬೇಡ. ನೀವಾದರೂ ನಮ್ಮ ಜಮೀನಿಗೆ ಬನ್ನಿ. ನಮ್ಮ ಜಮೀನಿಗೆ ಬಂದು ನೋಡಿ ಎಂದು ರೈತರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಆಗ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ರೈತರಿಗೆ ಸಮಜಾಯಿಸಿ ನೀಡಿದ್ದಾರೆ.
ಹಾವೇರಿ ಜಿಲ್ಲೆಗೆ ಕೇಂದ್ರ ತಂಡ..
ಮಳೆಹಾನಿ ಹಾಗೂ ಪ್ರವಾಹದಿಂದ ಹಾವೇರಿ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶದ ಸ್ಥಳಗಳಿಗೆ ಕೇಂದ್ರದ ಐಎಂಸಿಟಿ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಿದೆ. ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಕೇಂದ್ರ ತಂಡ ಭೇಟಿ ನೀಡಿದೆ.
ಈ ವೇಳೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖಾ ಸಚಿವಾಲಯದ ಹಿರಿಯ ಅಧಿಕಾರಿ ಎಸ್ ವಿ ಜಯಶೇಖರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿ ಕೈಲಾಶ್ ಸಂಖ್ಲಾ ನೇತೃತ್ವವಹಿಸಿದ್ದರು.
ಭೇಟಿ ಸಮಯದಲ್ಲಿ ಮಾತನಾಡಿದ ರೈತರು, ಪ್ರತಿ ವರ್ಷ ಅಲ್ಪ ಮಳೆಯಾದರೂ ಕೆರೆಗಳ ನೀರು ಜಮೀನುಗಳಿಗೆ ನುಗ್ಗುತ್ತದೆ. ಇದರಿಂದ ಬೆಳೆ ಹಾಳಾಗಿ ಹೋಗುತ್ತಿದೆ. ಆ ಬೆಳೆ ದನಕರುಗಳಿಗೂ ಉಪಯೋಗಕ್ಕೆ ಬಾರದಂತಾಗಿದೆ ಎಂದು ರೈತರು ತಮ್ಮ ಅಳಲನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರು.
ಓದಿ : ರಸ್ತೆ ಅಪಘಾತದಲ್ಲಿ ಜೆಡಿಎಸ್ ಕಾರ್ಯಕರ್ತ ಸಾವು.. ಅಂತಿಮ ದರ್ಶನ ಪಡೆದ ಹೆಚ್ಡಿಕೆ