ಹುಬ್ಬಳ್ಳಿ: ಮಹದಾಯಿ ನದಿ ತಿರುವು ಯೋಜನೆ ಜಾರಿ ವಿಚಾರ ಸುಪ್ರೀಂಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ತಿಳಿಸಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ದೆಹಲಿಯಲ್ಲಿ ಸಭೆ ಕರೆಯಲು ಸಿಎಂ ಜೊತೆ ಮಾತನಾಡುತ್ತಿದ್ದೇವೆ. ಗೋವಾ ರಾಜ್ಯದ ಜನರ ಬೇಡಿಕೆಯಂತೆ ಅಲ್ಲಿನ ಸಿಎಂ ಮಾತನಾಡಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಎಲ್ಲರೂ ಒಪ್ಪಲೇಬೇಕು. ಇದರಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರಕ್ಕೆ ನಿಯೋಗ ಒಯ್ಯುವ ಅವಶ್ಯಕತೆಯಿಲ್ಲ. ಅವಶ್ಯಕತೆ ಬಿದ್ದರೆ ಪ್ರಧಾನಿಯನ್ನು ಭೇಟಿಯಾಗಿ ಕರ್ನಾಟಕಕ್ಕೆ ಬೇಕಾದ ನೀರಿನ ಹಕ್ಕನ್ನು ಕೇಳುತ್ತೇವೆ ಎಂದರು.
ದೆಹಲಿಯಲ್ಲಿ ಸಿಎಎ ವಿರೋಧಿ ಹೋರಾಟ ತೀವ್ರಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಎಯಿಂದ ಈ ದೇಶದಲ್ಲಿರುವ 130 ಕೋಟಿ ಜನರಿಗೆ ಸಮಸ್ಯೆಯಾಗಲ್ಲ. ಸುಮ್ಮನೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ನರೇಂದ್ರ ಮೋದಿಯವರು ಜಗತ್ತಿನ ಒಬ್ಬ ಶ್ರೇಷ್ಠ ನಾಯಕ. ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ವಿರೋಧ ಪಕ್ಷಗಳು ಮಾಡುತ್ತಿರುವ ಕುತಂತ್ರವಿದು ಎಂದರು.