ಹುಬ್ಬಳ್ಳಿ: ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಳಿಗೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿದ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದ ತಂಡ ಐವರನ್ನು ಬಂಧಿಸಿ, 450 ಚೀಲ ಅಕ್ಕಿ, 5 ಲಕ್ಷ ರೂ. ನಗದು ಹಾಗೂ ನಾಲ್ಕು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ.
ಸರ್ಕಾರವು ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು ಆರೋಪಿ ಷಣ್ಮುಖಪ್ಪ ಬೆಟಗೇರಿಯು ಸಾರ್ವಜನಿಕರಿಂದ 10 ರಿಂದ 15 ರೂಪಾಯಿಗೆ ಖರೀದಿಸುತ್ತಿದ್ದ. ಬಳಿಕ, ಮಂಜುನಾಥ ಹರ್ಲಾಪುರ ಎನ್ನುವವರಿಗೆ ಮಾರಾಟ ಮಾಡುತ್ತಿದ್ದ. ಮಂಜುನಾಥ 35 ರಿಂದ 40 ರೂ. ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರಕ್ಕೆ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ದಾಳಿ ವೇಳೆ ವಶಕ್ಕೆ ಪಡೆದ ಒಟ್ಟು ಅಕ್ಕಿಯ ಮೌಲ್ಯ 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷದವರೆಗೆ ಉಚಿತ ಪಡಿತರ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಆದೇಶ ಹೊರಡಿಸಿತ್ತು. ಪ್ರತಿ ವ್ಯಕ್ತಿಗೆ 5 ಕೆ.ಜಿ ಆಹಾರ ಧಾನ್ಯಗಳನ್ನು ಈ ಕಾಯ್ದೆಯಡಿ ಒದಗಿಸಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ಕುಟುಂಬಗಳು ಪ್ರತಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯುತ್ತಿವೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ ಬಡವರಿಗೆ ಒಂದು ಕೆಜಿ ಅಕ್ಕಿಯನ್ನು 3 ರೂ.ಗೆ ಮತ್ತು ಕೆಜಿ ಗೋಧಿಯನ್ನು 2 ರೂ. ಗೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅಕ್ರಮ ಪಡಿತರ ಸಂಗ್ರಹ: ಸಾಗಿಸುವಾಗ ಸಿಕ್ಕಿಬಿದ್ದ ಕಳ್ಳರು, 168 ಕ್ವಿಂಟಲ್ ಅಕ್ಕಿ ವಶ
ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಪಂಗನಾಮ: ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಪಾವತಿಸದಿದ್ದರೆ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ಧಾರವಾಡ ದೇಸಾಯಿಗಲ್ಲಿಯ ಶ್ರೀರಂಗ ಎಸ್. ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಅವರಿಂದ ಬ್ಯಾಂಕ್ ಮಾಹಿತಿ ಪಡೆದು 1.49 ಲಕ್ಷ ರೂ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶ್ರೀರಂಗ ಅವರಿಗೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶಾಖೆ ಅಧಿಕಾರಿ ಹೆಸರಲ್ಲಿ ಕರೆ ಮಾಡಿದ ವಂಚಕ, ಬಾಕಿ ಹಣ ಪಾವತಿಸಲು ಹೇಳಿದ್ದಾನೆ. ಕಾರ್ಡ್ ಬಳಸದಿದ್ದರೂ ಬಾಕಿ ಮೊತ್ತ ಹೇಗೆ ತೋರಿಸುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಅದಕ್ಕೆ, ಕಾರ್ಡ್ ಬ್ಲಾಕ್ ಮಾಡುವುದಾಗಿ ಬೆದರಿಸಿದ ವಂಚಕ ಅವರಿಂದ ಕ್ರೆಡಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್ ಹಾಗೂ ಮುಕ್ತಾಯ ದಿನಾಂಕದ ಮಾಹಿತಿ ಪಡೆದಿದ್ದಾನೆ. ನಂತರ, ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿ, ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.