ಹುಬ್ಬಳ್ಳಿ: ಅನ್ಯ ಧರ್ಮಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಅವರ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರಿಗೆ ದೂರು ನೀಡಿದರು.
ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಗುರುವಾರ ಭೇಟಿ ನೀಡಿದ್ದ ಪ್ರಮೋದ್ ಮುತಾಲಿಕ್, ಗಣೇಶ ದರ್ಶನ ಪಡೆದುಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವಾಗ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಮುಸ್ಲಿಂ ನಾಯಕರು ಆರೋಪಿಸಿದ್ದಾರೆ.
ಮುಖಂಡ ಅಸ್ಪಾಕ್ ಕುಮಟಾಕರ್ ಮಾತನಾಡಿ, ಕರ್ನಾಟಕದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತರು ಪರಸ್ಪರ ಪ್ರೀತಿ, ವಿಶ್ವಾಸ, ಏಕತೆಯಿಂದ ಜೀವನ ಮಾಡುತ್ತಿದ್ದೇವೆ. ಆದರೆ ಪ್ರಮೋದ್ ಮುತಾಲಿಕ್ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿ ಶಾಂತಿಯನ್ನು ಕದಡುವ ಕೆಲಸ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರೊಂದಿಗೆ ಬಂದು ಪೊಲೀಸ್ ಕಮಿಷನರ್ಗೆ ಮನವಿಯನ್ನು ಕೊಟ್ಟಿದ್ದೇವೆ. ಪ್ರಮೋದ್ ಮುತಾಲಿಕ್ ಅವರ ಮೇಲೆ ತಕ್ಷಣ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಈ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಶಾಂತಿ ಕದಡುವವರಿಗೆ ಯಾವುದೇ ರೀತಿಯ ಅವಕಾಶ ಕೊಡಬಾರದು. ಪ್ರಮೋದ್ ಮುತಾಲಿಕ್ ಏನು ಯೋಚನೆ ಮಾಡದೆ ಹೇಳಿಕೆಗಳನ್ನು ಕೊಡುತ್ತಾರೆ. ಇದರಿಂದ ಜನರ ಭಾವನೆಗಳಿ ಧಕ್ಕೆ ಮತ್ತು ಸಮಸ್ಯೆಗಳಾಗುತ್ತವೆ ಎಂಬ ಅವರಿಗೆ ಅರಿವಿಲ್ಲ. ಪದೇ ಪದೆ ಇಂತಹ ಹೇಳಿಕೆಗಳನ್ನು ಕೊಡುತ್ತಾ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಮಾತನಾಡಿ, ನಿನ್ನೆ(ಗುರುವಾರ) ಗಣೇಶ ವಿಸರ್ಜನೆ ವೇಳೆ ಪ್ರಮೋದ್ ಮುತಾಲಿಕ್ ಕೊಟ್ಟಿರುವ ಹೇಳಿಕೆ ವಿರುದ್ಧ ಜೋನಲ್ ಕಮಿಷನರ್ ಹೆಚ್ಡಿಎಂಸಿ ದೂರು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಕಲಂ 153(ಎ), 295(ಎ) ಐಪಿಸಿ ಸೆಕ್ಷನ್ ಅಡಿಯಲ್ಲಿ ಎರಡು ಮತಗಳ ಮಧ್ಯ ವೈಷಮ್ಯ ಉಂಟುಮಾಡಿರುವ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಇದೇ ವೇಳೆ, ಗಾಡಿಪಾರು ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೆಳಗಾವಿ ಗಣೇಶ ಮಂಡಳಿಗೆ 75 ವರ್ಷ... ರಕ್ತದಾನ ಮಾಡಿ ಅಮೃತ ಮಹೋತ್ಸವ ಆಚರಿಸಿದ ಭಕ್ತರು