ಧಾರವಾಡ: ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿರುವ ಎಮ್ಮೆ, ಹಸು, ಹಂದಿ ಸೇರಿ ಎಲ್ಲಾ ಜಾನುವಾರುಗಳಿಗೆ 16ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ರೈತರ ಮನೆಮನೆಗೆ ತೆರಳಿ ಉಚಿತವಾಗಿ ಕಾಲುಬಾಯಿ ಲಸಿಕೆ ಹಾಕಲಾಗುತ್ತಿದ್ದು, ಎಲ್ಲ ರೈತ ಬಾಂಧವರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ, ನಂತರ ಲಸಿಕಾ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದರು.
ಕಾಲುಬಾಯಿ ರೋಗ ಸಾಂಕ್ರಾಮಿಕ ರೋಗವಾಗಿದ್ದು, ವೈರಾಣುವಿನಿಂದ ಹರಡುತ್ತದೆ. ಮಣ್ಣು, ನೀರು, ಗಾಳಿ ಮೂಲಕ ಜಾನುವಾರುದಿಂದ ಮತ್ತೊಂದು ಜಾನುವಾರುವಿಗೆ ತಗಲುತ್ತದೆ. ಲಸಿಕೆ ಹಾಕಿಸುವದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು. ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಯಾವುದೇ ಜಾನುವಾರುಗಳಿಗೆ ಕಾಲುಬಾಯಿ ರೋಗ ಹರಡಿದ ವರದಿಯಾಗಿಲ್ಲ. ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ರಾಷ್ಟ್ರೀಯ ಕಾಲುಬಾಯಿ ಲಸಿಕಾ ಅಭಿಯಾನದ ಮೂಲಕ 20 ಸುತ್ತು ದೇಶದ ಹಸು, ಎಮ್ಮೆ ಸೇರಿ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕುವ ಯೋಜನೆ ಹಾಕಿಕೊಂಡಿದ್ದು, ಅದರಂತೆ ಈಗ 16ನೇ ಸುತ್ತಿನ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ಕಾಲುಬಾಯಿ ರೋಗ ತಮ್ಮ ಜಾನುವಾರುಗಳಿಗೆ ಬಂದಿಲ್ಲವೆಂದು ಬಿಡದೇ, ಪ್ರತಿ ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ತಡೆಯಲು ಮುಂಜಾಗೃತವಾಗಿ ಈ ಲಸಿಕೆಯನ್ನು ಹಾಕಿಸಬೇಕು. ರಾಜ್ಯದ ಇತರ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ಜಾನುವಾರುಗಳನ್ನು ಖರೀದಿಸಿ ತರುವುದರಿಂದ, ಅವುಗಳಲ್ಲಿದ್ದ ರೋಗ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿ ಜಾನುವಾರುವಿಗೂ ತಪ್ಪದೆ ಲಸಿಕೆ ಹಾಕಿಸಬೇಕೆಂದು ತಿಳಿಸಿದರು.
ಲಸಿಕಾ ತಂಡ ಭೇಟಿ ನೀಡುವ ಪೂರ್ವದಲ್ಲಿ ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರುವ ಹಾಗೂ ವಾಹನಗಳಲ್ಲಿ ಧ್ವನಿವರ್ಧಕ ಬಳಸಿ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಗ್ರಾಮ ಸಮೀಕ್ಷೆ ಮಾಡಿ ಜಾನುವಾರುಗಳ ಪಟ್ಟಿ ತಯಾರಿಸಲಾಗುತ್ತದೆ. ಅದರಂತೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯೊಳಗೆ (ತಂಪು ವೇಳೆಯಲ್ಲಿ) ಪ್ರತಿ ರೈತರ ಮನೆ ಬಾಗಿಲಿಗೆ ಸಿಬ್ಬಂದಿ ಹೋಗಿ, ರೈತರ ಜಾನುವಾರುಗಳಿಗೆ ಲಸಿಕೆ ಹಾಕುತ್ತಾರೆ ಎಂದರು.
ಹೆಚ್ಚಿನ ಮಾಹಿತಿ ಹಾಗೂ ಯಾವುದೇ ರೈತರ ಜಾನುವಾರಗಳಿಗೆ ಲಸಿಕೆ ಹಾಕದೆ ಉಳಿದಿದ್ದರೆ ಅವರು ಜಿಲ್ಲಾ ಕೇಂದ್ರದ ಸಹಾಯವಾಣಿ: 0836-2447672 ಮತ್ತು ರಾಜ್ಯ ಮಟ್ಟದ ಸಹಾಯವಾಣಿ: 1804250012 ಗೆ ಉಚಿತ ಕರೆ ಮಾಡಿ ತಿಳಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.