ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಆದರೆ ಬಿಜೆಪಿಯಲ್ಲಿ ಅಸಮಾಧಾನ ಇರುವುದರಿಂದಲೇ ಈವರೆಗೆ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಅವರು, ನಮ್ಮಲ್ಲಿ ಅಸಮಾಧಾನ ಎಲ್ಲಿದೆ?. ಮೂರ್ನಾಲ್ಕು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗಲಿದೆ. ಈಗಾಗಲೇ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ಸಚಿವರು ಶೇ.75 ಕ್ಷೇತ್ರಕ್ಕೆ ಹೋಗಿ ಸ್ಥಳೀಯ ಶಾಸಕರನ್ನು, ಕಾರ್ಯಕರ್ತರುಗಳನ್ನು ಭೇಟಿಯಾಗಿ ಬಂದಿದ್ದಾರೆ. ಅವರೆಲ್ಲರೂ ಈಗಾಗಲೇ ವರದಿ ಸಲ್ಲಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ನಮ್ಮ ದೆಹಲಿ ವರಿಷ್ಠರು ಕೂಡ ಕೆಲವು ಸಲಹೆ ನೀಡಿದ್ದಾರೆ. ಹೊಸ ಮುಖ, ವಾಕ್ಚಾತುರ್ಯ, ಯುವಕರು ಸೇರಿ ಹಲವು ಮಾನದಂಡಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ. ಈ ನಿಟ್ಟಿನಲ್ಲಿ ವರದಿ ಸಿದ್ಧವಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಇನ್ನು ಕರ್ನಾಟಕಕ್ಕೆ 50 ವರ್ಷವಾಗಿದ್ದು, ಎಲ್ಲರಿಗೂ ಇದೊಂದು ಸುವರ್ಣಾವಕಾಶ. ಇಡೀ ವರ್ಷ ಹಬ್ಬದ ಆಚರಣೆಗೆ ತೀರ್ಮಾನ ಮಾಡಿದ್ದೇವೆ. ವಿಜಯನಗರ ನಾಡು ಹಂಪಿಯಿಂದ ಜ್ಯೋತಿ ಶುರುವಾಗಿದೆ. ಗುರುವಾರ ರಾತ್ರಿ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಮುಂದಿನ ಭಾಗವಾಗಿ ಇವತ್ತು ಗದಗನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. 50 ವರ್ಷದ ನೆನಪಿಗಾಗಿ ಭುವನೇಶ್ವರಿ ಭವನವನ್ನು ಕಟ್ಟಿಸಲು ಈಗಾಗಲೇ ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದು, ಅದಕ್ಕಾಗಿ ಜಾಗವನ್ನು ನೋಡುತ್ತಿದ್ದೇವೆ. ಇವತ್ತು ಹತ್ತು ಜನ ಸಚಿವರು ಗದಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಮತ್ತು ಅವರ ನಾಯಕರಲ್ಲಿ ಅಸಮಾಧಾನವಿದೆ. ದೇಶದ, ರಾಜ್ಯದ ಇತಿಹಾಸದಲ್ಲಿ ಸರ್ಕಾರ ರಚನೆ ಆಗಿ ಐದು ತಿಂಗಳು ಕಳೆದರೂ ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡುವ ಸಾಮರ್ಥ್ಯ ಇಲ್ಲ. ಇಂತಹ ಪರಿಸ್ಥಿತಿ ಬಿಜೆಪಿಯಲ್ಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ಬಿಜೆಪಿಯವರು ಬರ ಸಮೀಕ್ಷೆ ಮಾಡಲಿ, ಅವರು ದೆಹಲಿಗೆ ಹೋಗಿ ವರದಿ ಕೊಡಲಿ. ನಮ್ಮ ಸರ್ಕಾರದಿಂದ ಚಲುವರಾಯ ಸ್ವಾಮಿ, ಕೃಷ್ಣ ಭೈರೇಗೌಡ್ರು ತಂಡ ಬರ ಅಧ್ಯಯನ ಮಾಡಿದೆ. ಎಲ್ಲಾ ಜಿಲ್ಲೆಗಳಿಗೆ ಹೋಗಿ ಅಧ್ಯಯನ ಮಾಡಿ 175 ತಾಲೂಕಗಳನ್ನು ಬರ ಎಂದು ಸರ್ಕಾರ ಘೋಷಣೆ ಮಾಡಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಖಾತೆಯಲ್ಲಿ ಒಂದು ಸಾವಿರ ಕೋಟಿ ಗೂ ಹೆಚ್ಚು ಹಣ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: '5 ವರ್ಷ ನಾನೇ ಸಿಎಂ' ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಹೀಗಿತ್ತು