ಹುಬ್ಬಳ್ಳಿ: ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿವಿಧ ಕ್ಷೇತ್ರಗಳಿಗೆ ನಾನಾ ಕೊಡುಗೆಗಳನ್ನು ನೀಡಿದ್ದಾರೆ. ಆಯವ್ಯಯ ಕುರಿತಂತೆ ವಾಣಿಜ್ಯೋದ್ಯಮಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರೈಲ್ವೆ ಸಚಿವರಾಗಿದ್ದ ದಿ.ಸುರೇಶ್ ಅಂಗಡಿಯವರ ಕನಸು ಸಾಕಾರಗೊಳಿಸುವಲ್ಲಿ ರೈಲ್ವೆಗೆ ಸಿಎಂ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅಳ್ನಾವರ, ಗದಗ, ಲಕ್ಷ್ಮೇಶ್ವರ ಹಾಗೂ ಯಲವಿಗಿ ಭಾಗದ ರೈಲ್ವೆ ಯೋಜನೆಗೆ 927 ಕೋಟಿ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಧಾರವಾಡ -ಕಿತ್ತೂರು- ಬೆಳಗಾವಿ ರೈಲ್ವೆ ಅನುದಾನ ಘೋಷಣೆ ಮಾಡಿರುವುದನ್ನು ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಸಿಂಘಿ ಸ್ವಾಗತಿಸಿದ್ದಾರೆ.
ಕೃಷಿಯ ವಿವಿಧ ರಂಗಕ್ಕೆ ಪೂರಕವಾದ ಹಾಗೂ ಅಭಿವೃದ್ಧಿ ದೂರದೃಷ್ಟಿಯಿಂದ ಈ ಬಜೆಟ್ ಮಂಡನೆ ಮಾಡಲಾಗಿದೆ. ಕೃಷಿಯಲ್ಲಿ ತೋಟಗಾರಿಕೆಗೆ ಉತ್ತೇಜನಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಬೆಂಗಳೂರು ಭಾಗದಲ್ಲಿ ಸಿಎಂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ಹುಬ್ಬಳ್ಳಿ- ಧಾರವಾಡ ಅವಳಿನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಸಾಕಷ್ಟು ಭರವಸೆಯನ್ನು ಇಲ್ಲಿನ ಜನರು ಇಟ್ಟುಕೊಂಡಿದ್ದರು. ಆದರೆ ನಿರೀಕ್ಷೆ ಮಟ್ಟದಲ್ಲಿ ಬಜೆಟ್ ತೃಪ್ತಿಯಾಗಿಲ್ಲ ಎಂದು ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಕೃಷಿ ಉಪ ಸಮಿತಿ ಅಧ್ಯಕ್ಷ ಸಿ.ಎನ್.ಕರಿಕಟ್ಟಿ ಬೇಸರ ವ್ಯಕ್ತಪಡಿಸಿದರು.
ಬಹು ಜನಪ್ರಿಯ ಬಜೆಟ್ ಇದಾಗಿದ್ದು, ಅಭಿವೃದ್ಧಿ ಹಿತದೃಷ್ಟಿಯಿಂದ ಸ್ವಾಗತಾರ್ಹವಾಗಿದೆ. ರಾಜ್ಯದ ಅಭಿವೃದ್ಧಿಗೆ ಹೇಳಿ ಮಾಡಿಸಿದ ಬಜೆಟ್ ಇದಾಗಿದೆ. ಕೃಷಿ, ಎಂಎಸ್ಎಂಇ, ಉದ್ಯೋಗ, ರೈಲ್ವೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಬಜೆಟ್ ಇದಾಗಿದೆ. ಮಹದಾಯಿ, ಮೇಕೆದಾಟು ಹಾಗೂ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈಗ ಮಹದಾಯಿಗೆ 1000 ಕೋಟಿ ಮೀಸಲಿಟ್ಟಿದ್ದಾರೆ. ಈ ಭಾಗದ ಬೇಡಿಕೆ ಸ್ಪಂದಿಸಿರುವುದು ರಾಜ್ಯದ ಜನರ ಆಶಯಕ್ಕೆ ಸ್ಪಂದನೆ ನೀಡಿದಂತಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ್ ಜವಳಿ ಹೇಳಿದರು.
ಇದನ್ನೂ ಓದಿ: ಮತ್ತೆ ರಾಜಸ್ವ ಕೊರತೆಯ ಬಜೆಟ್ ಮಂಡನೆ; ಆದಾಯ ಸಂಗ್ರಹದ ಬೊಮ್ಮಾಯಿ ಲೆಕ್ಕಾಚಾರ ಹೇಗಿದೆ?