ಧಾರವಾಡ: ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಏಳು ಮಂದಿ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ.
ಪಾಲಿಕೆಯ ವಲಯ ಆಯುಕ್ತ ಮುಕುಂದ ಜೋಶಿ ಮತ್ತು ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ ಸೇರಿದಂತೆ ಏಳು ಜನರನ್ನ ಅಮಾನತು ಮಾಡಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಕಟ್ಟಡ ದುರಂತದಲ್ಲಿ ಇದುವರೆಗೆ 15 ಜನ ದುರ್ಮರಣ ಹೊಂದಿದ್ದು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಧಾರವಾಡದ ಸಬ್ ಅರ್ಬನ್ ಪೊಲೀಸರು ಬಂಧಿಸಿದ್ದಾರೆ.
ನಗರ ಯೋಜಕ ಮುಕುಂದ ಜೋಷಿ, ನಗರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಗದಗ, ಕಂದಾಯ ಇಲಾಖೆಯ ವಲಯ ಅಧಿಕಾರಿ ಪ್ರಭಾಕರ ದೊಡ್ಡಮನಿ, ಕಾರ್ಯನಿರ್ವಾಹಕ ಎಂಜನಿಯರ್ ವಿ.ಶ್ರೀಧರ,ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಪ್ಪ, ನಗರ ಯೋಜನೆ ಇಲಾಖೆ ಉಪ ನಿರ್ದೇಶಕ ಬಿ.ವಿ.ಹಿರೇಮಠ, ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ ಅಮಾನತುಗೊಂಡ ಅಧಿಕಾರಿಗಳು.
ಇನ್ನು ಘಟನಾ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಎನ್.ಡಿ.ಆರ್. ಎಫ್. ಹಾಗೂ ಎಸ್.ಡಿ.ಆರ್.ಎಫ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಗಾಗಲೆ 7 ಜನ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಕರ್ತವ್ಯಲೋಪದಡಿಯಲ್ಲಿ 7 ಜನ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಕಟ್ಟಡಕ್ಕೆ ಯಾವ ರೀತಿಯಾಗಿ ಅನುಮತಿ ಕೊಟ್ಟಿದ್ದಾರೆ ಎಂಬ ಮಾಹಿತಿಯನ್ನ ತರಿಸಿಕೊಳ್ಳುತ್ತಿದ್ದೇವೆ. ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಹುತೇಕ ರೆರಾ ಆ್ಯಕ್ಟನ್ನ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ರೆರಾ ಆ್ಯಕ್ಟ್ ಇಗ ಬಂದಿದೆ ಅಷ್ಟೆ. ಇವತ್ತು ನಗರಾಬಿವೃದ್ಧಿ ಯೋಜನೆಯಡಿಯಲ್ಲಿ ಇಂತಹ ಕಳಪೆ ಕಟ್ಟಡಗಳ ಬಗ್ಗೆ ಆ್ಯಕ್ಷನ್ ತಗೊಳ್ಳಲಿಕ್ಕೆ ಸೂಚನೆ ನೀಡಿದ್ದೇನೆ ಎಂದರು.
ನಗರಾಬಿವೃದ್ಧಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಸೂಚನೆ ನೀಡಿದ್ದೇನೆ. ಸರ್ಕಾರದಿಂದ ಆದೇಶ ಮಾಡಲಿಕ್ಕೆ ಆಗಲ್ಲ. ಏಕೆಂದರೆ ನೀತಿ ಸಂಹಿತೆ ಇರುವುದರಿಂದ ಆದೇಶ ಮಾಡಲು ಆಗುವುದಿಲ್ಲ. ಉನ್ನತ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ.
ಇನ್ನೂ ಎಂಜಿನಿಯರ್ ರಚಿಸಿದ ಕಟ್ಟಡದ ವಿನ್ಯಾಸದ ಫೋಟೋಗಳು ಲಭ್ಯವಾಗಿದೆ. ವಿವಿಧ ಹೈಟೆಕ್ ಮಳಿಗೆಗಳು, ಆಫೀಸ್ಗಳು, ಶಾಪಿಂಗ್ ಮಾಲ್ ಸೇರಿದಂತೆ ಹಲವು ಕೊಠಡಿಗಳು, ಡೈಯಾಗ್ರಾಮ್ ಹೈಟೆಕ್ ಕಾರ್ ಪಾರ್ಕಿಂಗ್ ಸೇರಿದಂತೆ ಐಶಾರಾಮಿ ಕಟ್ಟಡಕ್ಕೆ ಪ್ಲಾನ್ ಮಾಡಲಾಗಿತ್ತು. ಆದ್ರೆ ಕಂಪ್ಯೂಟರ್ ಡೈಯಾಗ್ರಾಮ್ನಲ್ಲಿ ಮಾತ್ರ ಹೈಟೆಕ್ ಕಟ್ಟಡದ ಚಿತ್ರ ಬಿಡಿಸಿ ಯಾಮಾರಿಸಿದ್ದಾರೆ ಎಂಬ ಆರೋಪದ ಮೇಲೆ ಎಂಜಿನಿಯರ್ ವಿವೇಕ್ ಪವಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.