ಧಾರವಾಡ: ಕೋಟೂರು ಗ್ರಾಪಂ ಉಪಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಕಮ್ಮಾರ ಎಂಬುವವರೇ ಹತ್ಯೆಗೀಡಾದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ. ದುಷ್ಕರ್ಮಿಗಳು ಪ್ರವೀಣ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಚಿಕಿತ್ಸೆ ಫಲಕಾರಿಯಾಗದೇ ಎಸ್ಡಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ದುಷ್ಕರ್ಮಿಗಳು ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಗರಗ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ಪ್ರವೀಣ್ ಕಮ್ಮಾರ ಕೊಲೆ ಹಿನ್ನೆಲೆ ಎಸ್ಡಿಎಂ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೆಳಹಂತದ ಕಾರ್ಯಕರ್ತನ ಹತ್ಯೆ ಆಗಿದೆ. ಇದು ರಾಜಕೀಯ ಕೊಲೆ, ಇದೊಂದು ದುರ್ದೈವ. ಮೊದಲು ಯೋಗೇಶ ಗೌಡರ ಕೊಲೆ ಆಗಿತ್ತು. ಅದು ತನಿಖೆ ಸಹ ಆಗ್ತಿದೆ. ಈಗ ಪ್ರವೀಣ್ ಕಮ್ಮಾರ ಕೊಲೆ ಆಗಿದೆ. ಶಾಸಕ ಅಮೃತ ದೇಸಾಯಿ ಅವರು ಪ್ರವೀಣ್ ಅವರಿಗೆ ಎಚ್ಚರದಿಂದ ಇರಲು ಹೇಳಿದ್ದರು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಆರೋಪಿತರ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಹಾಗೆ ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಇದನ್ನು ಮಾಡಲು ನಾನು ಮತ್ತು ಶಾಸಕ ಅಮೃತ ದೇಸಾಯಿ ಇಬ್ಬರು ಜತೆಗಿರುತ್ತೇವೆ. ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಯಾರ ಜೊತೆಗೂ ಜಗಳ ಇಲ್ಲದ ವ್ಯಕ್ತಿಯಾಗಿದ್ದ ಪ್ರವೀಣ್ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ ಯುವಕ. ಆದರೇ ಇದು ರಾಜಕೀಯಕ್ಕೆ ನಡೆದ ಕೊಲೆ ಎಂಬ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾತನಾಡಿ, ನಿನ್ನೆ ಗ್ರಾಮದಲ್ಲಿ ಜಾತ್ರೆ ನಡೆದಿತ್ತು. ಈ ಸಂದರ್ಭದಲ್ಲಿ ಕುಡಿದಿದ್ದ ಕೆಲವರು ಗಲಾಟೆ ಮಾಡಿದ್ದಾರೆ. ಗಲಾಟೆ ಬಿಡಿಸಲು ಬಂದಿದ್ದ ಪ್ರವೀಣ್ ಕಮ್ಮಾರ ಅವರನ್ನ ಹತ್ಯೆ ಮಾಡಲಾಗಿದೆ. ಮೊದಲು ಎರಡು ಗುಂಪುಗಳಲ್ಲಿ ಮಾತ್ರ ಜಗಳ ಇರುತ್ತದೆ. ಅದಾದ ಮೇಲೆ ಪ್ರವೀಣ್ ಎಂಟ್ರಿಯ ನಂತರ ಅವನ ಹತ್ಯೆ ಮಾಡಲಾಗುತ್ತದೆ. ಈ ಬಗ್ಗೆ ಮೂವರು ಜನರನ್ನು ವಶಕ್ಕೆ ಪಡೆಯಲಾಗಿದೆ. ಈ ಮೂರು ಜನರು ಹತ್ಯೆಯಲ್ಲಿ ಭಾಗಿ ಆಗಿದ್ದರು ಎಂದು ಖಾತ್ರಿಯಾಗಿದೆ ಎಂದರು. ಇನ್ನು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಮುಂದಿನ ತನಿಖೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಯಾವ ಕಾರಣಕ್ಕೆ ಹತ್ಯೆ ಆಗಿದೆ ಎಂದು ತನಿಖೆ ನಂತರ ತಿಳಿಯಲಿದೆ ಎಂದರು.
ಇದನ್ನೂ ಓದಿ: ಕೊಲೆಗೆ ಪ್ರತೀಕಾರ : ಅಣ್ಣ ಮಾಡಿದ ತಪ್ಪಿಗೆ ತಮ್ಮನ ಬಲಿ ಪಡೆದ ದುಷ್ಕರ್ಮಿಗಳು