ಧಾರವಾಡ : ಆರ್ಎಸ್ಎಸ್ ಸಂಘಟನೆಯ ಬಗ್ಗೆ ಹಗುರವಾಗಿ ಮಾತನಾಡಬಾರದು. ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ ಅವರು ಸಂಘವನ್ನು ಕೆಣಕಿ ಕೈ ಸುಟ್ಟುಕೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಸಂಘದ ವಿರುದ್ಧ ಹಗುರ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಸುಟ್ಟು ಹೋಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಪರವಾಗಿ ಪ್ರಚಾರ ಮಾಡಲು ನಗರಕ್ಕೆ ಆಗಮಿಸಿದಾಗ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಂಘದ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಭೂಷಣವಲ್ಲ. ಅವರ ಪಕ್ಷದ ಹಿರಿಯರಾದ ಜಾಫರ್ ಷರೀಫ್ ಅವರು ಸಂಘದ ಬಗ್ಗೆ ಒಳ್ಳೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ವಿ.ಎಸ್. ಉಗ್ರಪ್ಪ ಅವರು ಸಂಘದ ಶಾಖೆಗೆ ಹೋದವರು ಎಂದು ಹೇಳಿದರು.
ಈ ಹಿಂದೆ ಸಂಘವನ್ನು ನಿಷೇಧಿಸಲು ಹೋದವರು ಕೈಸುಟ್ಟುಕೊಂಡಿದ್ದಾರೆ. ಇದರಲ್ಲಿ ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾಗಾಂಧಿ ಕೂಡ ಇದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಲೆಕ್ಕ ಎಂದು ಟೀಕಿಸಿದ್ದಾರೆ.
ಹೊರಟ್ಟಿ ಗೆಲ್ಲಿಸಲು ಮನವಿ : ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆ. ಹುಬ್ಬಳ್ಳಿ, ಧಾರವಾಡದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯಸಭಾದ ಮೂರೂ ಸ್ಥಾನಗಳನ್ನು ಪಡೆಯಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭರವಸೆ ವ್ಯಕ್ತಪಡಿಸಿದರು.
ಓದಿ : ರಾಜ್ಯಸಭೆ ಚುನಾವಣೆ: ಜೆಡಿಎಸ್ ಮತಗಳನ್ನು ಒಡೆಯಲು ಕಾಂಗ್ರೆಸ್ಗೆ ಸಾಧ್ಯವಿಲ್ಲ- ನಿಖಿಲ್ ಕುಮಾರಸ್ವಾಮಿ