ಹುಬ್ಬಳ್ಳಿ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಿದ್ದೇ ತಡ ಟಿಕೆಟ್ ವಂಚಿತರು ಈಗ ಬಿಜೆಪಿ ವಿರುದ್ದ ಸಿಡಿದು ನಿಂತಿದ್ದಾರೆ. ಕುಂದಗೋಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಸ್.ಐ.ಚಿಕ್ಕನಗೌಡರ ಅವರಿಗೆ ಟಿಕೆಟ್ ತಪ್ಪಿದ್ದು, ಬಿಜೆಪಿ ಹೈಕಮಾಂಡ್ ಎಂ.ಆರ್.ಪಾಟೀಲ್ ಅವರಿಗೆ ಮಣೆ ಹಾಕಿದೆ. ಇದರಿಂದ ಅಸಮಾಧಾನಗೊಂಡ ಚಿಕ್ಕನಗೌಡರ ಅದರಗುಂಚಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ನಡೆಸಿ ತಮ್ಮ ಅಕ್ರೋಶ ಹೊರಹಾಕಿದ್ದಾರೆ.
ನಾನು ಬಿಜೆಪಿಗೆ ಬರಲ್ಲ ಎಂದು ಘೋಷಣೆ ಮಾಡಿದ ಚಿಕ್ಕನಗೌಡರ, ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಬಂಧಿ ಆಗಿರುವ ಚಿಕ್ಕನಗೌಡರ ಅವರು ಕಾಂಗ್ರೆಸ್‌ಗೆ ಯಾಕೆ ಸೇರಬಾರದು ಎಂದು ಬೆಂಬಲಿಗರ ಸಭೆಯಲ್ಲಿ ಕಾರ್ಯಕರ್ತರಿಗೆ ಪ್ರಶ್ನೆ ಹಾಕಿದ್ದಾರೆ.
ಮತ್ತೆ ನಾನು ಬಿಜೆಪಿಗೆ ಬರೋದಿಲ್ಲ: ನಾನು ಈ ಬಾರಿ ಸ್ಪರ್ಧೆ ಮಾಡೇ ಮಾಡ್ತೀನಿ. ನಾನು ಚುನಾವಣೆಯಲ್ಲಿ ಗೆಲ್ತೀನಿ. ನನಗೆ ಟಿಕೆಟ್ ತಪ್ಪಿಸಿದ್ದು ಮಹಾನ್ ನಾಯಕ್. ತಾನೇ ಬಂದು ಚುನಾವಣೆ ನಿಂತರೂ ನನ್ನ ಅಭ್ಯಂತರ ಇಲ್ಲ. ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಿಸಿದ್ದಾರೆ. ಇನ್ನು ನಾವು ಯಾವ ಲೆಕ್ಕ ಎಂದು ಪರೋಕ್ಷವಾಗಿ ಪ್ರಹ್ಲಾದ ಜೋಶಿಗೆ ಟಾಂಗ್ ನೀಡಿದ್ದಾರೆ.
ಇವತ್ತು ಬಿಜೆಪಿ ಯಾವ ರೀತಿ ಬೆಳೆದಿದೆ ಅನ್ನೋದು ಗೊತ್ತಿದೆ. ವಾಜಪೇಯಿ, ಅಡ್ವಾನಿ ಪಕ್ಷ ಬೆಳೆಸಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ, ಈಶ್ವರಪ್ಪ ಮೂಲಕ ಮನೆ ಮನೆಗೆ ತಲುಪಿದೆ. ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್, ಬೆಲ್ಲದ್ ಮೂಲಕ ಬಿಜೆಪಿ ಬೆಳೆದಿದೆ. ನಾನು ಏಳು ಬಾರಿ ಚುನಾವಣೆ ಮಾಡಿದ್ದೇನೆ. ಕುಂದಗೋಳದಲ್ಲಿ ಬಿಜೆಪಿ ಬೇರು ಮಟ್ಟಕ್ಕೆ ಇಳಿಯೋಕೆ ಕಾರಣ ಯಾರು ನಿಮಗೆ ಗೊತ್ತಿದೆ ಎಂದು ಹೇಳಿದರು.
ಎಂ.ಆರ್.ಪಾಟೀಲ್ ವಿರುದ್ಧ ಅಸಮಾಧಾನ: ಎಷ್ಟು ಬ್ಯಾಂಕ್ ಲೂಟಿ ಹೊಡಿದೀರಿ, ಎಲ್ಲಿದ್ರಿ, ಎಲ್ಲಿ ಮಲಗಿದ್ರಿ ಎನ್ನುತ್ತಾ ಪರೋಕ್ಷವಾಗಿ ಎಂ.ಆರ್. ಪಾಟೀಲ್ ವಿರುದ್ಧ ಚಿಕ್ಕನಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿವರೆಗೂ ಚಿಕ್ಕನಗೌಡರಗೆ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆ ಇತ್ತು. ಸರ್ವೆ ಎಲ್ಲಿ ಹೋಯ್ತು. ನಾನು ಯಾವ ನಾಯಕರ ಬಗ್ಗೆ ಟೀಕೆ ಮಾಡೋಲ್ಲ. ಪಕ್ಷದ ಬಗ್ಗೆ ಟೀಕೆ ಮಾಡೋದಿಲ್ಲ. ನೀವೆಲ್ಲ ಶಪಥ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ನಾಲ್ಕನೇ ಸ್ಥಾನಕ್ಕೆ ಕಳಿಸಬೇಕು ಎಂದು ಬೆಂಬಲಿಗರಿಗೆ ಚಿಕ್ಕನಗೌಡರ ಕರೆ ನೀಡಿದರು.
ಸತ್ತೋರ ಮನೆಗೆ ಹೋಗೋಣ ಆದ್ರೆ, ಮತ್ತೊಮ್ಮೆ ಬಿಜೆಪಿ ಮನೆಗೆ ಹೋಗೋ ಸ್ಥಿತಿ ತರೋದು ಬೇಡ.
ನಾನು ಪಕ್ಷಕ್ಕೆ ರಾಜೀನಾಮೆ ಕೊಡಲು ತಯಾರಿದ್ದೇನೆ. ನಾನು ನಮ್ಮ ನಾಯಕರ ಗಮನಕ್ಕೆ ತಂದು ಹೆಜ್ಜೆ ಮುಂದಿಟ್ಟಿದ್ದೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ಪತ್ರ ಬರೆದಿದ್ದೇನೆ.
ಸಭೆಯಲ್ಲಿ ಪತ್ರ ತೋರಿಸಿದ ಚಿಕ್ಕನಗೌಡರ ಪತ್ರಕ್ಕೆ ಸಹಿ ಮಾಡಿಲ್ಲ, ನಮ್ಮ ನಾಯಕರನ್ನು ಭೇಟಿಯಾಗಿ ತೀರ್ಮಾನ ಮಾಡ್ತೀನಿ. ದುಡ್ಡಿದ್ದವರು ಬಹಳ ಜನ ಇದ್ದಾರೆ.ದುಡ್ಡ ಇಸ್ಕೊಂಡು ಬುದ್ದಿ ಕಲಿಸಿ ಎಂದರು.
ಇದನ್ನೂಓದಿ:ಕೈ ತಪ್ಪಿದ ಬೈಲಹೊಂಗಲ ಟಿಕೆಟ್: ಬಿಜೆಪಿ ವಿರುದ್ಧ ಡಾ.ವಿಶ್ವನಾಥ ಪಾಟೀಲ ಬಂಡಾಯ