ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಈಗ ಸದ್ಯ ಜಾರಿಯಲ್ಲಿರುವ ಕೃಷಿ ಕಾನೂನನ್ನು ವಾಪಸ್ ಪಡೆದು, ಹಳೆಯ ಎಪಿಎಂಸಿ ಕಾನೂನು ಜಾರಿಗೆ ತರುತ್ತೇವೆ ಹೇಳಿಕೆ ಕೊಟ್ಟಿದ್ದರು. ಅದು ರೈತ ವಿರೋಧಿ ಆಗಿರುವ ಕ್ರಮವಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕೃಷಿ ಕಾನೂನು ರೈತರಿಗೆ ಪೂರಕವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರ ಕೃಷಿ ಕಾಯ್ದೆಯನ್ನು ರದ್ದು ಮಾಡಬಾರದೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಆಗ್ರಹಿಸುತ್ತದೆ ಎಂದು ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೂತನ ಕೃಷಿ ಕಾಯ್ದೆಯನ್ನು ರದ್ದು ಮಾಡಬಾರದು. ಒಂದು ವೇಳೆ ಕೃಷಿ ಕಾಯಿದೆಯನ್ನು ರದ್ದುಗೊಳಿಸಿ, ಹಳೆಯ ಎಪಿಎಂಸಿ ಕಾಯಿದೆ ಜಾರಿಗೊಳಿಸಿದರೆ, ಮುಂದಿನ ದಿನಗಳಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ಅವೈಜ್ಞಾನಿಕವಾಗಿ ವಿದ್ಯುತ್ ಬೆಲೆ ಏರಿಕೆ ಮಾಡಿದ್ದರಿಂದ ಸಣ್ಣ ಕೈಗಾರಿಕೆ ಉದ್ಯಮಗಳ ಮೇಲೆ ಅಪಾರ ಹೊಡೆತ ಬಿದ್ದಂತಾಗಿದೆ. ಕಾಟನ್ ಕೈಗಾರಿಕೆ, ರೈಸ್ ಮಿಲ್ ಸೇರಿ ಸಣ್ಣ ಕೈಗಾರಿಕೆಗಳು ಆರ್ಥಿಕ ಹೊರೆ ಅನುಭವಿಸುತ್ತಿವೆ. ಸರ್ಕಾರ ಇವುಗಳ ಉಳುವಿಗೆ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದು ಗುರಿಕಾರ ಆಗ್ರಹಿಸಿದರು.
ರೈತ ಮಕ್ಕಳ ವಿದ್ಯಾನಿಧಿ ಯೋಜನೆ ರದ್ದುಪಡಿಸಿ, ಬಡ ರೈತರ ಮಕ್ಕಳಿಗೆ ಸರ್ಕಾರದ ಅನ್ಯಾಯ ಮಾಡಿದೆ. ಗೋಹತ್ಯೆ ಹಾಗೂ ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಗೆ ಗೋಶಾಲೆ ಆರಂಭಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ರದ್ದುಪಡಿಸಿ ಗೋ ಹಂತಕರಿಗೆ ದಾರಿ ಮಾಡಿಕೊಟ್ಟಿದೆ ಎಂದು ಹರಿಹಾಯ್ದರು.
ಭೂ ಸಿರಿ, ಕಿಸಾನ್ ಸನ್ಮಾನ್, ರೈತ ಶಕ್ತಿ, ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಪಡಿಸಿದ್ದು, ನೀರಾವರಿ ಯೋಜನೆ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗೋಷ್ಟಿಯಲ್ಲಿ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಕುಂದಗೋಳಮಠ, ರೈತ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷ ರಾಘವೇಂದ್ರ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೃಷಿ ಕಾಯಿದೆ ವಾಪಸ್ ಪಡೆಯುವ ಬಗ್ಗೆ ಹೇಳಿದ್ದ ಸಚಿವರು.. ಹಿಂದಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ತಿದ್ದುಪಡಿ ಮಾಡಲಾಗಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯಿದೆಯನ್ನು ನಮ್ಮ ಸರ್ಕಾರ ವಾಪಸ್ ಪಡೆಯಲಿದ್ದು, ತಿದ್ದುಪಡಿಗೂ ಮೊದಲು ಹೇಗಿತ್ತೋ ಆ ರೀತಿ ಮತ್ತೆ ಕಾಯ್ದೆಯನ್ನು ಮರುತಿದ್ದುಪಡಿ ಮಾಡುತ್ತೇವೆ ಜುಲೈ 11 ರಂದು ವಿಧಾನ ಪರಿಷತ್ನಲ್ಲಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದರು.
ಸಂಬಂಧಿತ ಸುದ್ದಿ.. ಬಿಜೆಪಿ ಸರ್ಕಾರ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್: ಸಚಿವ ಶಿವಾನಂದ ಪಾಟೀಲ್