ಹುಬ್ಬಳ್ಳಿ: ಆನಂದ್ ಮಾಮನಿ ನನಗೆ ಬಹಳ ಆತ್ಮೀಯರಾಗಿದ್ರು. ದೀಪಾವಳಿ ಹಬ್ಬದ ಸಂತೋಷದ ಸಮಯದಲ್ಲಿ ಅವರು ನಿಧನರಾಗಿರುವುದು ಬಹಳ ದುಃಖವಾಗಿದೆ. ಪರಮಾತ್ಮ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದರು.
ನಗರದಲ್ಲಿಂದು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಆನಂದ್ ಮಾಮನಿಯನ್ನು ನಾನು 15 ದಿನಗಳ ಹಿಂದೆ ಭೇಟಿ ಮಾಡಿದ್ದೆ. ಮಾಮನಿ ಈ ಹೋರಾಟದಲ್ಲಿ ಗೆದ್ದು ಬರೋ ಭರವಸೆ ವ್ಯಕ್ತಪಡಿಸಿದ್ರು. ಅವರಲ್ಲಿ ದೃಢವಾದ ನಂಬಿಕೆ ಇತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪರಮಾತ್ಮ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು.
ಬರೆದು ಕೊಟ್ಟಿರುವುದನ್ನ ಬಿಟ್ಟು ಪ್ರತ್ಯೇಕ ಪ್ರಶ್ನೆ ಮಾಡಿದ್ರೆ ರಾಹುಲ್ ಗಾಂಧಿಗೆ ಉತ್ತರ ಕೊಡಲು ಬರುವುದಿಲ್ಲ. ಭಾರತ್ ಜೋಡೋ ಕಾಂಗ್ರೆಸ್ ತೋಡೋ ಯಾತ್ರೆ ಆಗ್ತಿದೆ. ಹಲವರು ಕಾಂಗ್ರೆಸ್ ಚೋಡೋ ಮಾಡ್ತಿದಾರೆ. ಅವರು ಜೋಡೋ ಮಾಡಬೇಕಿರೋದು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿ: ಗಣ್ಯರು, ಸಾರ್ವಜನಿಕರಿಂದ ಆನಂದ ಮಾಮನಿ ಅಂತಿಮ ದರ್ಶನ
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ದೀಪಾವಳಿ ನಂತರ ದೆಹಲಿಗೆ ಬರ್ತೀನಿ ಎಂದಿದ್ದಾರೆ. ಕುಳಿತು ಮಾತನಾಡಿ ಬಳಿಕ ನಿಮಗೆ ಮಾಹಿತಿ ನೀಡುತ್ತೇವೆ ಎಂದ ಅವರು, ದೀಪಾವಳಿ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವ ಸುಳಿವು ನೀಡಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂತಾಪ: ಕಳೆದ ಹಲವಾರು ದಿನಗಳಿಂದ ಆನಂದ್ ಮಾಮನಿ ಆಸ್ಪತ್ರೆಯಲ್ಲಿ ಇದ್ರು. ನಾನು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿ ಹಾರೈಸಿ ಬಂದಿದ್ದೆ. ಆನಂದ್ ಮಾಮನಿ ಬಹಳ ಕ್ರೀಯಾಶೀಲರಾಗಿದ್ರು. ಸವದತ್ತಿ ಭಾಗದಲ್ಲಿ ಬಿಜೆಪಿ ಶಕ್ತಿಯನ್ನು ಹೆಚ್ಚಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ತೀನಿ ಅಂತಾ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದರು.
ಇದನ್ನೂ ಓದಿ: ಸಿಎಂ ಕಲಬುರಗಿ ಜಿಲ್ಲಾ ಪ್ರವಾಸ ರದ್ದು: ಮಾಮನಿ ಅಂತ್ಯಕ್ರಿಯೆಗೆ ಆಗಮಿಸದ ಬಿಎಸ್ವೈ
ಮಾಮನಿ ಬಹಳ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ನಾನು ಚುನಾವಣೆ ಬಳಿಕ ಯಲ್ಲಮ್ಮನ ದರ್ಶನಕ್ಕೆ ಹೋಗಿದ್ದೆ. ಅವರು ಕೂಡ ಅಲ್ಲಿಗೆ ಬಂದಿದ್ರು. ಅವರಿಗೆ ಕ್ಯಾನ್ಸರ್ ಬಂದಿದೆ ಎಂದು ಯಾರಿಗೂ ಹೇಳಿರಲಿಲ್ಲ. ಅವರು ತಮ್ಮಷ್ಟಕ್ಕೆ ತಾವೇ ಆರೈಕೆ ಮಾಡಿಕೊಂಡಿದ್ರು. ಬಹಳ ಸಣ್ಣ ವಯಸ್ಸಿನಲ್ಲಿ ನಿಧನರಾಗಿರುವುದು ಬಹಳ ದುಃಖವಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.