ಹುಬ್ಬಳ್ಳಿ: 2023 ರ ವಿಧಾನಸಭೆ ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಈಗಿನಿಂದಲೇ ಕಸರತ್ತು ಶುರುವಾಗಿದೆ. ಹೌದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಗೆ ಟಿಕೆಟ್ ಆಕಾಂಕ್ಷಿಗಳ ದಂಡು ಆಗಮಿಸುತ್ತಿದೆ.
ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿರುವ ಜೋಶಿ ಅವರ ಮನೆಗೆ ಕಮಲ ಪಡೆಯ ನಾಯಕರು ಭೇಟಿ ನೀಡುತ್ತಿದ್ದು, ಟಿಕೆಟ್‌ಗಾಗಿ ದುಂಬಾಲು ಬಿದ್ದಿದ್ದಾರೆ. ಉತ್ತರ ಕರ್ನಾಟಕದ ಸಾಕಷ್ಟು ಕ್ಷೇತ್ರಗಳಿಂದ ಆಕಾಂಕ್ಷಿಗಳು ಕಾರ್ಯಕರ್ತರನ್ನು ಜೊತೆಗೂಡಿ ಟಿಕೆಟ್‌ಗಾಗಿ ಮನವಿ ಮಾಡುತ್ತಿದ್ದಾರೆ. ಯಾದಗಿರಿ, ಗುರುಮಠಕಲ್, ಗಂಗಾವತಿ, ರೋಣ ಸೇರಿದಂತೆ ಅನೇಕ ಕ್ಷೇತ್ರಗಳಿಂದ ಆಗಮಿಸುತ್ತಿರುವ ನಾಯಕರು ಟಿಕೆಟ್‌ಗಾಗಿ ಜೋಶಿಯವರ ಮನವೊಲಿಸುತ್ತಿದ್ದಾರೆ.
ಇಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕೂಡ ಜೋಶಿಯವರನ್ನು ಭೇಟಿಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆ ಮಾಡಿದ್ದರಿಂದ ಎಲ್ಲಿ ಗಂಗಾವತಿ ಟಿಕೆಟ್ ಕೈ ತಪ್ಪಲಿದೆ ಎಂಬ ಆತಂಕದಲ್ಲಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನವಳ್ಳಿ ಅವರು ಹುಬ್ಬಳ್ಳಿಗೆ ಆಗಮಿಸಿದ್ದರಿಂದ ನಮ್ಮ ನಾಯಕರನ್ನು ಭೇಟಿಯಾಗಿದ್ದೇನೆ. ಇದರಲ್ಲಿ ಅಂತ ಬೆಳವಣಿಗೆ ಏನು ಇಲ್ಲ ಎಂದರು.