ಧಾರವಾಡ : ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ನಿನ್ನೆ(ಮಂಗಳವಾರ) ರಾತ್ರಿ ಬಿಡುಗಡೆ ಮಾಡಿದ್ದು, ಟಿಕೆಟ್ ವಂಚಿತರು ಹಲವೆಡೆ ಬಂಡಾಯವೆದ್ದಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಅವರಿಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಎರಡು ದಿನದಲ್ಲಿ ನಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಇನ್ನಿಬ್ಬರು ಟಿಕೆಟ್ ಆಕಾಂಕ್ಷಿಗಳು ಕೂಡ ಬೇಜಾರಾಗಿದ್ದಾರೆ. ಅವರೂ ನನ್ನ ಜೊತೆಗಿದ್ದಾರೆ. ವರಿಷ್ಠರು ನನ್ನ ಮನವೊಲಿಸಿದರೂ ನಾನು ಅದಕ್ಕೆ ಸೊಪ್ಪು ಹಾಕುವುದಿಲ್ಲ. ಮುಂಬರುವ ದಿನದಲ್ಲಿ ಧಾರವಾಡ ಗ್ರಾಮೀಣ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ನನ್ನ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದರು.
"ನಾನು ತಕ್ಷಣವೇ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ನಿಗಮಕ್ಕೆ ಕೂಡಾ ನಾನು ಚ್ಯುತಿ ಬರದಂತೆ ಕೆಲಸ ಮಾಡಿದ್ದೇನೆ. ನಿಗಮಕ್ಕೂ ರಾಜೀನಾಮೆ ನೀಡುತ್ತೇನೆ. ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ" ಎಂದು ಹೇಳಿದರು. "ಎಲ್ಲರೂ ನನಗೆ ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಏನು ಉತ್ತರ ಕೊಡಲಿ?, ಬೆಂಬಲಿಗರ ಸಭೆ ನಡೆಸಿ ನಂತರ ಕ್ರಮಕೈಗೊಳ್ಳುತ್ತೇನೆ" ಎಂದರು. "ನಾನು ಯಾರ ಜೊತೆಗೂ ಮಾತನಾಡಿಲ್ಲ. ಕುಮಾರಸ್ವಾಮಿ ಜೊತೆ ಕೂಡ ಮಾತನಾಡಿಲ್ಲ" ಎಂದು ತಿಳಿಸಿದರು.
ಇದನ್ನೂ ಓದಿ : ಕೈ ತಪ್ಪಿದ ಬೈಲಹೊಂಗಲ ಟಿಕೆಟ್: ಬಿಜೆಪಿ ವಿರುದ್ಧ ಡಾ.ವಿಶ್ವನಾಥ ಪಾಟೀಲ ಬಂಡಾಯ
"ಮಾಜಿ ಶಾಸಕಿ ಸೀಮಾ ಮಸೂತಿ ಕೂಡಾ ನನಗೆ ಬೆಂಬಲ ಸೂಚಿಸಿದ್ದಾರೆ. ಅನಾರೋಗ್ಯ ಕಾರಣದಿಂದ ಅವರು ಇವತ್ತು ಬಂದಿಲ್ಲ. ಜನರ ಅಭಿಪ್ರಾಯ ಪ್ರಕಾರ ನಾನು ಶಾಸಕ ಎಂದುಕೊಂಡಿದ್ದೆ. ಟಿಕೆಟ್ ಕೈ ತಪ್ಪಿರುವುದರಿಂದ ಜನ ಕೂಡ ತಕ್ಕ ಪಾಠ ಕಲಿಸುತ್ತಾರೆ. ಪಕ್ಷದ ವಿಷಯ ಸಂಬಂಧ ನಾನು ಆಣೆ ಪ್ರಮಾಣ ಮಾಡಿಲ್ಲ, ನಾನು ಈಗ ಪಕ್ಷದಲ್ಲೇ ಇಲ್ಲ, ನಾನು ನನ್ನ ಜೀವನದಲ್ಲಿ ಕಮಿಷನ್ ವ್ಯವಹಾರ ಮಾಡಿಲ್ಲ, ನನ್ನ ಬಗ್ಗೆ ಮಾತಾಡುವಾಗ ಹುಷಾರಾಗಿ ಮಾತನಾಡಬೇಕು. ದುಡ್ಡಿನ ಡೀಲ್ ಮಾಡಿಲ್ಲ. ಯಾರಾದರೂ ನನ್ನ ವಿರುದ್ಧ, ಕಮಿಷನ್ ವ್ಯವಹಾರ ಮಾಡಿರುವ ಬಗ್ಗೆ ಆರೋಪ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ" ಎಂದು ಸವಾಲು ಹಾಕಿದರು.
"ಇಂದು ಕೆಲ ಶಾಸಕರು ನಮ್ಮ ಮನೆಗೆ ಬಂದು ಎಲ್ಲ ಮನಸ್ತಾಪ ಬಿಡುವಂತೆ ಹೇಳಿದರು. ಅದಕ್ಕೆ ನಾನು ನಿಮ್ಮ ಸಹವಾಸ ಬೇಡ ಎಂದು ಹೇಳಿದ್ದೇನೆ. ಮೋದಿ ಅವರು ಬಂದು ಹೇಳಿದರೂ ನಾನು ಹೋಗಲ್ಲ ಸಿಎಂ ಮಾಡ್ತೇನೆ ಎಂದರೂ ಹೋಗಲ್ಲ" ಎಂದು ತವನಪ್ಪ ಅಷ್ಟಗಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಶಿವಮೊಗ್ಗ: ಪುತ್ರಿ ಬಿಜೆಪಿ ಸೇರ್ಪಡೆಗೆ ಕಾಗೋಡು ತಿಮ್ಮಪ್ಪ ಅಸಮಾಧಾನ