ಹುಬ್ಬಳ್ಳಿ: ''ನಾವು ಎಲ್ಲ ದೇವರಗಳನ್ನು ನಂಬುತ್ತೇವೆ ಮತ್ತು ಗೌರವದಿಂದ ಕಾಣುತ್ತೇವೆ. ಶ್ರೀರಾಮನನ್ನೂ ಪ್ರೀತಿಯಿಂದ ಗೌರವರಿಸುತ್ತೇವೆ. ದೇವರೆಂದು ಒಪ್ಪಿಕೊಂಡಿದ್ದು, ಹಿಂದೂ ಧರ್ಮದಲ್ಲಿ ಅದರ ಸ್ಥಾನವೂ ಇದೆ. ಆದರೆ, ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಲಾಭ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ'' ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ತಯಾರಿ ಕುರಿತು ಪ್ರತಿಕ್ರಿಯೆ ನೀಡಿದರು. ''ನಾವು ಚುನಾವಣೆಗೆ ತಯಾರಿ ನಡೆಸಿದ್ದೇವೆ. ಕಾಂಗ್ರೆಸ್ನಲ್ಲಿ ಆಗಲಿ, ಬಿಜೆಪಿಯಲ್ಲಿ ಆಗಲಿ ಬಿರುಸಿನ ಇನ್ನೂ ಚಟುವಟಿಕೆ ಆರಂಭ ಆಗಿಲ್ಲ. ಆದರೆ, ಈಗಾಗಲೇ ನಮ್ಮವರು ದೆಹಲಿಗೆ ಕರೆಸಿ ಚರ್ಚೆ ಮಾಡಿದ್ದಾರೆ. ಚುನಾವಣಾ ಪ್ರಕ್ರಿಯೆ ಆರಂಭವಾಗಿವೆ. ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ'' ಎಂದು ತಿಳಿಸಿದರು.
ಸಚಿವರಿಗೆ ಚುನಾವಣಾ ಹೊಣೆ ವಹಿಸಿರುವ ಕುರಿತು ಮಾತನಾಡಿ, ''ಸಹಜವಾಗಿಯೇ ಸಚಿವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅವರೂ ಸಹ ಜನರ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಹೀಗಾಗಿ ಸಚಿವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಜೊತೆಗೆ ಶಾಸಕರಿಗೂ ಅಷ್ಟೇ ಜವಾಬ್ದಾರಿಯೂ ಇರುತ್ತದೆ. ಎಲ್ಲರೊಂದಿಗೆ ಸಮನ್ವಯಯ ಸಾಧಿಸಿ ಗೆಲುವು ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದ್ದಾರೆ'' ಎಂದು ಸಚಿವರು ವಿವರಿಸಿದರು.
ರಾಹುಲ್ ಗಾಂಧಿ ಅವರು ಭಾರತ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿಯಿಂದ ವಿರೋಧ ವ್ಯಕ್ತ ಮಾಡುತ್ತಿದ್ಧಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಬಿಜೆಪಿಯವರು ಯಾವಾಗಲೂ ಹಾಗೆಯೇ. ಇನ್ನೊಂದು ಪಕ್ಷಗಳನ್ನು ಹತ್ತಿಕ್ಕುವುದು. ಪ್ರಜಾಪ್ರಭುತ್ವದ ವ್ಯವಸ್ಥೆ ಧಕ್ಕೆ ತರುವಂತಹ ಕಾರ್ಯದಲ್ಲಿ ಬಿಜೆಪಿಯವರು ಮಗ್ನರಾಗಿರುತ್ತಾರೆ. ಇಡಿ, ಐಟಿ, ಸಿಬಿಐ ಎಲ್ಲ ಸಂಸ್ಥೆಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ಧಾರೆ. ಹೆದರಿಸುವಂತದ್ದು ಮಾಡುತ್ತಾರೆ. ಈಗ ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ, ''ಹೆದರಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಚುನಾವಣೆ ನಡೆಸಲಾರದಂತೆ ಹೆದರಿಕೆ, ಬೆದರಿಕೆ ಹಾಕುವುದು. ಕಾಂಗ್ರೆಸ್ ಜೊತೆಗೆ ಇದ್ದರೆ, ಇಡಿ ಮತ್ತು ಸಿಬಿಐ ದಾಳಿ ಮಾಡಿಸುತ್ತೇವೆ ಎಂದು ಸಣ್ಣ- ಪುಟ್ಟ ವಿಷಯಗಳಿಗೂ ಕೇಸ್ ಹಾಕಲಾಗುತ್ತಿದೆ. ಪ್ರಜಾಪ್ರಭುತ್ವ ವವಸ್ಥೆಯಲ್ಲಿ ಯಾರು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ'' ಎಂದು ದೂರಿದರು.
''ಭಯದ ವಾತಾವರಣ ನಿರ್ಮಾಣ ಮಾಡಿ ಮತ ಕೇಳುವ ಕೃತ್ಯಕ್ಕೆ ಬಿಜೆಪಿಯವರು ಇಳಿದಿದ್ದಾರೆ. ಆದರೆ, ರಾಹುಲ್ ಗಾಂಧಿ ಯಾತ್ರೆ ಯಾವುದೇ ಲಾಭ, ಆಸೆ, ಆಕಾಂಕ್ಷೆ ಇಲ್ಲದೇ ಇರುವಂತಹದ್ದು. ಯಾವುದೇ ದುರುದ್ದೇಶ ಇಲ್ಲದೇ ಪಕ್ಷ ಕಟ್ಟುತ್ತಿದ್ದಾರೆ. ಇದರಿಂದ ಭ್ರಮನಿರಸನಗೊಂಡು ಏನೇನು ಬಿಜೆಪಿಯವರು ಮಾಡುತ್ತಿದ್ದಾರೆ'' ಎಂದು ಸಚಿವ ತಿಮ್ಮಾಪುರ ತಿರುಗೇಟು ನೀಡಿದರು.
ಇದನ್ನೂ ಓದಿ: ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್