ಹುಬ್ಬಳ್ಳಿ: ಬಹುನಿರೀಕ್ಷೆಯ ಧಾರವಾಡ - ಬೆಂಗಳೂರು ನಡುವಣ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದಾರೆ. "ರೈಲು ಸಂಚಾರ ಆರಂಭಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ರೈಲ್ವೆ ಸಚಿವರು ನೀಡಿದ್ದಾರೆ" ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಅವಳಿ ನಗರದ ಜನರ ಬಹು ನಿರೀಕ್ಷಿತ ಈ ಉತ್ಕೃಷ್ಟ ರೈಲಿನ ಪ್ರಯಾಣದ ಅನುಭವವನ್ನು ಶೀಘ್ರದಲ್ಲಿಯೇ ಆಸ್ವಾದಿಸಬಹುದು ಎಂದು ಸಚಿವ ಜೋಶಿ ಹೇಳಿದ್ದಾರೆ. ಈ ಮೂಲಕ ರಾಜಧಾನಿ ಮತ್ತು ಧಾರವಾಡ ಮಧ್ಯೆ ವಂದೇ ಭಾರತ್ ರೈಲಿನಲ್ಲಿ ವೇಗವಾಗಿ ಸಂಚರಿಸಬೇಕೆಂದು ಕಂಡಿದ್ದ ಕನಸು ನನಸಾಗುವ ಸಮಯ ಸಮೀಪಿಸುತ್ತಿದೆ.
ರಾಜ್ಯದ 2ನೇ ವಂದೇ ಭಾರತ್ ರೈಲು: ಈಗಾಗಲೇ ಮೈಸೂರು - ಚೆನ್ನೈ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. ಇದು ರಾಜ್ಯದ ಮೊದಲ ಹಾಗೂ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಾಗಿತ್ತು. ಇದೀಗ ರಾಜ್ಯದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಲ್ಲಿ ಸಂತಸ ಇಮ್ಮಡಿಯಾಗಿದೆ.
ರೈಲಿನ ವಿಶೇಷತೆ ಏನು?: ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದ ವೇಗದ ರೈಲು ಸೇವೆ. ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಐಷಾರಾಮಿ ವ್ಯವಸ್ಥೆ, ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದೆ. ವಿಶ್ವದರ್ಜೆಯ ಸೌಕರ್ಯಗಳನ್ನು ಹೊಂದಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳನ್ನು ರೈಲು ಹೊಂದಿದೆ. ವಂದೇ ಭಾರತ್ ರೈಲಿನಲ್ಲಿ ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ ಕೂಡ ಇದೆ. ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ವೈಫೈ, ಚಾರ್ಜಿಂಗ್ ಪಾಯಿಂಟ್, ಸಿಸಿ ಟಿವಿ, ಬಯೋ ಶೌಚಾಲಯ ವ್ಯವಸ್ಥೆ ಪ್ರಯಾಣಿಕರಿಗೆ ದೊರೆಯುತ್ತದೆ.
3 ಆವೃತ್ತಿಗಳಲ್ಲಿ ವಂದೇ ಭಾರತ್: 2024 ರ ಫೆಬ್ರವರಿ-ಮಾರ್ಚ್ನಲ್ಲಿ ವಂದೇ ಚೇರ್ ಕಾರ್, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ಸ್ ಎಂದು ಮೂರು ಆವೃತ್ತಿಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಜೂನ್‌ನಲ್ಲಿ ಎಲ್ಲ ರಾಜ್ಯಗಳಿಗೂ ವಿಸ್ತರಣೆ: ಈಗಾಗಲೇ ಹಲವು ರಾಜ್ಯಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಿದ್ದು, ಶೀಘ್ರದಲ್ಲೇ ಎಲ್ಲ ರಾಜ್ಯಗಳಿಗೂ ಈ ಸೇವೆ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದರು. ಜೂನ್ ಮಧ್ಯಕ್ಕೆ ಬಹುತೇಕ ಎಲ್ಲ ರಾಜ್ಯಗಳೂ ವಂದೇ ಭಾರತ್ ರೈಲು ಪಡೆಯಲಿವೆ ಎಂದು ಸಚಿವರು ಭರವಸೆ ನೀಡಿದ್ದರು.
ಇದನ್ನೂ ಓದಿ: ಫೋಟೋ ತೆಗೆದುಕೊಳ್ಳಲು ವಂದೇ ಭಾರತ್ ರೈಲು ಹತ್ತಿ ಒಳಗೆ ಸಿಲುಕಿಕೊಂಡ ವ್ಯಕ್ತಿ.. ವಿಡಿಯೋ ವೈರಲ್