ಧಾರವಾಡ/ಹುಬ್ಬಳ್ಳಿ: ಧಾರವಾಡ ಐಐಐಟಿಯ ನೂತನ ಕಟ್ಟಡದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26 ರಂದು ನೆರವೇರಿಸಲಿದ್ದಾರೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಅಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡ ಐಐಐಟಿ ಕ್ಯಾಂಪಸ್ ಭೇಟಿ ನೀಡಿ ಪರಿಶೀಲನೆ : ಇಂದು ಮಧ್ಯಾಹ್ನ ಅವರು ಐಐಐಟಿ ಕ್ಯಾಂಪಸ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಐಐಐಟಿ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು ಸೇರಿದಂತೆ ಸುಮಾರು 700 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರಪತಿಗಳಿಗೆ ನೀಡಬೇಕಾದ ರೀತಿಯ ಪ್ರಕಾರ ಊಟ ಸಿದ್ದಪಡಿಸಲಾಗುತ್ತದೆ. ಅದರೊಂದಿಗೆ ಉತ್ತರ ಕರ್ನಾಟಕ ಶೈಲಿಯ ಊಟವು ಇರಲಿದೆ. ಈ ವೇಳೆ ಐಐಐಟಿ ನಿರ್ಮಾಣಕ್ಕೆ ಜಾಗ ನೀಡಿದ ರೈತರು ಪಾಲ್ಗೊಳ್ಳಲಿದ್ದು, ಅವರಿಗೆ ಸನ್ಮಾನ ಮಾಡಲಾಗುವುದು. ರಾಷ್ಟ್ರಪತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಬಗ್ಗೆ ಇನ್ನೂ ಚರ್ಚಿಸಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಧಾರವಾಡ ಐಐಐಟಿಯ ಕುಲಸಚಿವ ಚನ್ನಪ್ಪ ಅಕ್ಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೋಶ ಜಗಲಾಸರ್ ಸೇರಿದಂತೆ ಐಐಐಟಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಪತಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಪರಿಶೀಲನೆ: ಪೌರ ಸನ್ಮಾನ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಇದೇ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದು, ಹುಬ್ಬಳ್ಳಿಯ ಜಿಮ್ ಖಾನ್ ಮೈದಾನದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಗಳು ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಆಗಮಿಸುತ್ತಿರುವುದು ನಿಜಕ್ಕೂ ಮಹತ್ವದ ಕ್ಷಣವಾಗಿದೆ. ಈಗಾಗಲೇ ಕಾರ್ಯಕ್ರಮ ಪೂರ್ವ ತಯಾರಿ ಆಗಿದೆ. ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.
ಅವಳಿನಗರದ ಸೌಭಾಗ್ಯ ಎಂದ ಶೆಟ್ಟರ್ : ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ರಾಷ್ಟ್ರಪತಿಗಳಿಗೆ ಪೌರಸನ್ಮಾನ ಆಗುತ್ತಿರುವುದು ವಿಶೇಷವಾಗಿದೆ. ಹುಬ್ಬಳ್ಳಿ ಧಾರವಾಡ ಜನರಿಗೆ ಇದೊಂದು ಹೊಸ ಅನುಭವ. ಬಹಳಷ್ಟು ವರ್ಷಗಳ ನಂತರ ರಾಷ್ಟ್ರಪತಿ ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಆಗಮಿಸುತ್ತಿರುವುದು ನಿಜಕ್ಕೂ ಸೌಭಾಗ್ಯ ಎಂದು ಅವರು ಹೇಳಿದರು.
ಇದೇ ವೇಳೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜಿಮ್ ಖಾನ್ ಮೈದಾನ ವಿವಾದದ ಸ್ಥಳ ಎಂದು ಯಾರು ಹೇಳಿದ್ದಾರೆ. ಕೋರ್ಟಿನಲ್ಲಿದೆ ನಿಜ. ಆದರೆ ಇಲ್ಲಿ ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ನಿಟ್ಟಿನಲ್ಲಿ ಇಂತಹದೊಂದು ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ: ಬೆಂಗಳೂರಿನಲ್ಲಿ ಪೂರ್ವ ಸಿದ್ಧತಾ ಸಭೆ, ರಾಹುಲ್ ಗಾಂಧಿ ಆಪ್ತ ಸಹಾಯಕರ ತಂಡ ಭಾಗಿ