ಧಾರವಾಡ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನು ಮರೆಯಬಾರದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಟಾಂಗ್ ನೀಡಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಮಾತನಾಡಲು ಬೇರೆ ವಿಷಯವಿಲ್ಲ. ಹೀಗಾಗಿ ಆರ್ಎಸ್ಎಸ್ ಬಗ್ಗೆ ಪದೇ ಪದೆ ಟೀಕೆ ಮಾಡುತ್ತಿದ್ದಾರೆ ಎಂದರು.
ಚಡ್ಡಿ, ಪಂಚೆ ಅನ್ನೋದು ಅಸಂಸ್ಕೃತ ಮಾತುಗಳು. ಪ್ರತಿಯೊಬ್ಬರೂ ಚಡ್ಡಿ ಹಾಕಿಕೊಳ್ಳಲೇಬೇಕು. ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಇವೆಲ್ಲವೂ ಕೀಳು ಮಟ್ಟದ ಪ್ರಚಾರ. ಚಡ್ಡಿ ಮತ್ತು ಪಂಚೆ ಬಗ್ಗೆ ಮಾತಾಡೋದು ಸಂಸ್ಕೃತರ ಲಕ್ಷಣ ಅಲ್ಲ. ಪ್ರಚಾರಕ್ಕೋಸ್ಕರ ಬಾಯಿಗೆ ಬಂದ ಹಾಗೆ ಮಾತಾಡಬಾರದು. ಹೀಗೆಲ್ಲ ಮಾತನಾಡಿ ಕೀಳು ಪ್ರಚಾರ ತೆಗೆದುಕೊಳ್ಳೋದನ್ನು ಬಂದ್ ಮಾಡಬೇಕು ಎಂದು ಹರಿಹಾಯ್ದರು.
ಇದನ್ನೂ ಓದಿ: ಆರ್ಎಸ್ಎಸ್-ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದರಾಮಯ್ಯಗೆ ಇರುವ ಗೌರವವೂ ಹಾಳಾಗುತ್ತೆ: ಬಿಎಸ್ವೈ
ರಸಗೊಬ್ಬರ ಸಮಸ್ಯೆ ಬಗ್ಗೆ ಮಾತನಾಡಿ, ಈಗಾಗಲೇ ಎಲ್ಲ ಭಾಗದಲ್ಲಿ ಗೊಬ್ಬರ ಸಮಸ್ಯೆ ನಿವಾರಣೆ ಆಗಿದೆ. ಒಂದಿಷ್ಟು ಕಡೆ ಗೊಬ್ಬರವನ್ನು ತೆಗೆದಿಟ್ಟು ಸ್ಟಾಕ್ ಇಲ್ಲ ಅಂತಿದ್ದರು. ಅವರೆಲ್ಲ ಈಗ ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಗೊಬ್ಬರ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.