ಹುಬ್ಬಳ್ಳಿ: ಹಳೆ ಸರ್ಕಾರ ಹೋಗಿ ಹೊಸ ಸರ್ಕಾರ ಬಂದರೂ ಕೃಷಿ ಸಾಲ ಮನ್ನಾ ಫಲಾನುಭವಿ ರೈತರಿಗೆ ಬ್ಯಾಂಕ್‌ಗಳಿಂದ ನೋಟಿಸ್ ಬರುವುದು ಮಾತ್ರ ನಿಂತಿಲ್ಲ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಹತ್ತಾರು ರೈತರಿಗೆ ಬ್ಯಾಂಕ್ ನೋಟಿಸ್ ಬಂದಿದೆ. ಇದರಿಂದ ಸಾಲ ಮನ್ನಾ ಆಗೋ ಖುಷಿಯಲ್ಲಿದ್ದ ರೈತರೀಗ ಬ್ಯಾಂಕ್ ನೋಟಿಸ್ ನೋಡಿ ಕಂಗಾಲಾಗಿದ್ದಾರೆ.
ಒಂದು ಕಡೆ ಸಾಲ ಮನ್ನಾ ಆಗದೆ ಬಡ್ಡಿ ದುಪ್ಪಟ್ಟಾಗಿದೆ. ಈ ರೈತರೆಲ್ಲ ಪ್ರತಿ ವರ್ಷ ತಾವು ಪಡೆದ ಬೆಳೆ ಸಾಲದ ಬಡ್ಡಿ ತುಂಬಿ ನವೀಕರಣ ಮಾಡಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಸರ್ಕಾರದ ಸಾಲ ಮನ್ನಾ ಘೋಷಣೆ ನಂಬಿ ಕಳೆದ ವರ್ಷದಿಂದ ಸಾಲ ನವೀಕರಣ ಮಾಡಿಕೊಂಡಿರಲಿಲ್ಲ. ಅಲ್ಲದೇ ನವೀಕರಣ ಮಾಡಲು ಬಡ್ಡಿಯನ್ನು ಸಹ ಬ್ಯಾಂಕ್ ಸಿಬ್ಬಂದಿ ತುಂಬಿಸಿಕೊಂಡಿರಲಿಲ್ಲ. ಇದೀಗ ಅಂತಹ ರೈತರು ಪಡೆದ ಸಾಲದಲ್ಲಿ ಬರೀ 25 ಸಾವಿರ ರೂಪಾಯಿ ಮಾತ್ರ ಮನ್ನಾ ಆಗಿದ್ದು, ಉಳಿದ ಬೆಳೆ ಸಾಲಕ್ಕೆ ಬ್ಯಾಂಕ್ಗಳು ಶೇ.14ರಷ್ಟು ಬಡ್ಡಿ ವಿಧಿಸಿ ನೋಟಿಸ್ ನೀಡಿವೆ. ಯಾರು ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ರೂ. ಮನ್ನಾ ಮಾಡಲಾಗಿದೆ. ಈ ಕುರಿತು ಬಹುತೇಕ ರೈತರಿಗೆ ಸರಿಯಾದ ಮಾಹಿತಿಯೇ ಇಲ್ಲ. ಜೊತೆಗೆ ಆ ರೀತಿಯ ನಿಯಮಾವಳಿ ಇದ್ದರೆ ಋುಣಮುಕ್ತ ಪತ್ರ ಮನೆಗೆ ಕಳುಹಿಸಿ ಯಾಕೆ ಮೋಸ ಮಾಡಬೇಕಿತ್ತು ಎಂದು ಆಕ್ರೋಶದಿಂದ ರೈತರು ಪ್ರಶ್ನಿಸುತ್ತಿದ್ದಾರೆ.
ಬಡ್ಡಿ ಶೇ. 4ರಿಂದ 14ಕ್ಕೆ ಏರಿಕೆ:
ಪ್ರತಿ ವರ್ಷದಂತೆ ಬೆಳೆ ಸಾಲ ನವೀಕರಣ ಮಾಡಿಕೊಂಡಿದ್ದರೆ ರೈತರು ಶೇ. 4ರ ಪ್ರಮಾಣದಲ್ಲಿ ಬಡ್ಡಿ ತುಂಬಬೇಕಾಗಿತ್ತು. ಆದರೆ, ಇದೀಗ ಹಣ ಬಾಕಿ ಇರುವ ಹಿನ್ನೆಲೆಯಲ್ಲಿ ಶೇ.14ರಷ್ಟು ಬಡ್ಡಿ ತುಂಬಬೇಕು. ಬರೀ 25 ಸಾವಿರ ರೂ. ಮಾತ್ರ ಮನ್ನಾ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿದರೆ ಸರ್ಕಾರವನ್ನೇ ಕೇಳಿ ಎನ್ನುತ್ತಾರಂತೆ.