ಹುಬ್ಬಳ್ಳಿ: ಇನ್ನೆರಡು ದಿನಗಳಲ್ಲಿ ಹಸೆಮಣೆ ಏರಿ ಹೊಸ ಬದುಕಿಗೆ ಕಾಲಿಡುವ ಸಂಭ್ರಮದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹಸೆಮಣೆ ಏರುವ ಬದಲು ನೇರವಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯ ಪಿಎಸ್‌ಐ ಮದುವೆ ಇನ್ನೆರಡು ದಿನಗಳಲ್ಲಿ ಬೆಳಗಾವಿಯ ಅಥಣಿಯಲ್ಲಿ ನಿಶ್ಚಯವಾಗಿತ್ತು. ಇದೇ ಸಂಭ್ರಮದಲ್ಲಿದ್ದ ಅವರು, ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧ ಠಾಣೆಗಳಲ್ಲಿರುವ ತನ್ನ ಸ್ನೇಹಿತರನ್ನು ಭೇಟಿ ಮಾಡಿ ಆಮಂತ್ರಣ ಪತ್ರ ನೀಡುವ ಸಂಭ್ರಮದಲ್ಲಿದ್ದರು. ಮದುವೆ ಸಂಬಂಧ ಒಂದು ತಿಂಗಳ ರಜೆಯನ್ನೂ ಪಡೆದಿದ್ದರು.
ಬೆಂಗಳೂರಿನಿಂದ ಹೊರಡುವ ಮೊದಲು ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್19 ತಪಾಸಣೆಗೆ ಒಳಪಟ್ಟಿದ್ದರು. ಅವಳಿ ನಗರದಲ್ಲಿ ಓಡಾಡಿದ ಇವರು, ಸ್ನೇಹಿತರನ್ನು ಭೇಟಿ ಮಾಡಿ ಆಹ್ವಾನಿಸಿದ್ದರು. ಆದರೆ ಬೆಳಗಾವಿ ಹೊರಡುವ ಸಂದರ್ಭದಲ್ಲಿ ಬೆಂಗಳೂರು ಆಸ್ಪತ್ರೆಯಿಂದ ಬಂದ ಕರೆಯೊಂದು, ಇವರಲ್ಲಿ ಸೋಂಕು ಇರುವುದನ್ನು ದೃಢಪಡಿಸಿತು. ಹೀಗಾಗಿ ಹುಬ್ಬಳ್ಳಿ ಕಿಮ್ಸ್‌ನಲ್ಲಿ ದಾಖಲಾಗುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಮದುವೆ ಸಂಭ್ರಮದಲ್ಲಿದ್ದ ವರ ಹಸೆಮಣೆ ಏರುವ ಬದಲು, ನೇರವಾಗಿ ಕಿಮ್ಸ್‌ನಲ್ಲಿ ದಾಖಲು ಆಗಿದ್ದಾರೆ. ಇಷ್ಟು ಮಾತ್ರವಲ್ಲ, ಇವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಅವಳಿ ನಗರದ ಐದು ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ನಿಟ್ಟಿನಲ್ಲಿ ಪಿಎಸ್‌ಐ ಭೇಟಿ ನೀಡಿದ್ದ ಇಲ್ಲಿನ ಉಪನಗರ ಠಾಣೆಯನ್ನು ಪಾಲಿಕೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದಾರೆ.